ಬೆಂಗಳೂರು: ಬೆಂಗಳೂರಿನಲ್ಲಿ ಸೆರೆಸಿಕ್ಕ ಐವರು ಶಂಕಿತ ಉಗ್ರರನ್ನು ಉಗ್ರರನ್ನು ಸಿಸಿಬಿ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದು, 7 ದಿನ ವಶಕ್ಕೆ ನೀಡಲಾಗಿದೆ. ತನಿಖಾಧಿಕಾರಿ ಎಸಿಪಿ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟ್ಗೆ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಆವರಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿಗರನ್ನು ಬುಧವಾರ ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿಯೊಂದು ಬೆಚ್ಚಿಬೀಳಿಸಿದೆ. ನಿಖರ ಮಾಹಿತಿ ಪಡೆದು ನಗರ ಅಪರಾಧ ವಿಭಾಗ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು ಒಬ್ಬ ಜೈಲಿನಲ್ಲಿದ್ದರೆ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಈ ತಂಡ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿತ್ತು ಎಂದು ಶಂಕಿಸಲಾಗಿದೆ.