ಬೆಂಗಳೂರು: ನಗರದಲ್ಲಿ ಭಾರಿ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿ ಸಿಕ್ಕಿಬಿದ್ದಿರುವ ಐವರು ಶಂಕಿತ ಉಗ್ರರಿಂದ ವಶಕ್ಕೆ ಪಡೆಯಲಾಗಿರುವ 4 ಜೀವಂತ ಗ್ರೆನೇಡ್ಗಳ ಹಿಂದಿನ ರಹಸ್ಯ ಭೇದಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಗ್ರೆನೇಡ್ಗಳು ಎಲ್ಲಿ ಬಂದವು, ಶಂಕಿತರಿಗೆ ತಲುಪಿಸಿದ್ದು ಯಾರು, ಎಲ್ಲೆಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರೆಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಿದ್ಧತೆ ನಡೆಸಿದ್ದು, ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ, ರಾಷ್ಟ್ರೀಯ ಬಾಂಬ್ ಡೇಟಾ ಸೆಂಟರ್ಗಳು ) ಪರಿಶೀಲನೆ ಆರಂಭಿಸಲಿವೆ.
ಮೊದಲಿಗೆ ಗ್ರೆನೇಡ್ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಮಾಡಲಾಗುತ್ತಿದ್ದು, ಅವುಗಳ ತಯಾರಿಕೆಗೆ ಬಳಕೆಯಾಗಿರುವ ಕಚ್ಚಾ ವಸ್ತುಗಳ ವಿಂಗಡಣೆ ಮಾಡಲಾಗುತ್ತದೆ. ಬಳಿಕ ಪ್ರತಿಯೊಂದು ಕಚ್ಚಾವಸ್ತು ಎಲ್ಲಿ ತಯಾರಾಗಿರಬಹುದು? ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಗ್ರೆನೇಡ್ ಮಾದರಿಯನ್ನು ಬಳಿಕ ಎನ್.ಬಿ.ಡಿ.ಸಿ ಡಾಟಾಗಳ ಜತೆಗೆ ಅನಾಲಿಸಿಸ್ ಮಾಡಲಾಗುತ್ತದೆ.
ದೇಶದಲ್ಲಿ ಸಂಭವಿಸುವ ಪ್ರತೀ ಸ್ಪೋಟಗಳ ಡಾಟಾ ನಿರ್ವಹಣೆ ಮಾಡುವ ಎನ್ಬಿಡಿಸಿ ಈ ಮಾದರಿಯ ಗ್ರೆನೇಡ್ ಎಲ್ಲಿಯಾದರೂ ಬಳಕೆಯಾಗಿದೆಯಾ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲಿಸುತ್ತದೆ. ಸ್ಫೋಟ ಮತ್ತು ಅದರ ಪರಿಣಾಮವೇನು ಎಂಬ ಮಾಹಿತಿ ಲಭ್ಯವಾಗಲಿದೆ ಎಂದು ಸಿಸಿಬಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಶಂಕಿತ ಉಗ್ರರ ಮೊಬೈಲ್ನಲ್ಲಿ ವಾಟ್ಸ್ಆಪ್ ಚಾಟಿಂಗ್ ಮತ್ತು ಕರೆಗಳು ಪತ್ತೆಯಾಗಿದ್ದು, ಶಂಕಿತರು ವಾಟ್ಸ್ಆಪ್ ಮೂಲಕ ಹಲವರಿಗೆ ಕರೆ ಮಾಡಿದ್ದಾರೆ, ಜತೆಗೆ ಚಾಟಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.
ಕೆಲವರ ಬಳಿ ಆಂಡ್ರಾಯ್ಡ್ ಮೊಬೈಲ್ ಇದ್ದರೆ ಇನ್ನೂ ಕೆಲವರ ಬಳಿ ಬೆಸಿಕ್ ಮೊಬೈಲ್ಗಳಿವೆ. ಸದ್ಯ ಶಂಕಿತರ ಬಳಿಯಿದ್ದ 12 ಮೊಬೈಲ್ ಫೋನ್ ರಿಟ್ರೀವ್ ಮಾಡಲು ಸಿಸಿಬಿ ಕಳಿಸಿದೆ
ವಿದೇಶಕ್ಕೆ ಪರಾರಿಯಾಗಿರುವ ಶಂಕಿತ ಉಗ್ರ ಜುನೈದ್ ಬಂಧನಕ್ಕಾಗಿ ಇಂಟರ್ ಪೋಲ್ ನೆರವು ಪಡೆಯಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಕಂಡು ಬಂದಿದೆ.