ವಿಟ್ಲ : ಕೆದಿಲ ಗ್ರಾಮದ ಕಾಂತುಕೋಡಿಯ ಮುಳುಗು ಸೇತುವೆಯೊಂದರಲ್ಲಿ ಚಾಲಕ ಪಿಕಪ್ ಚಲಾಯಿಸಿ ನಡು ನೀರಿನಲ್ಲಿ ಸಿಲುಕಿ ಹಾಕಿಕೊಂಡಿರುವ ಘಟನೆ ನಡೆದಿದೆ.
ಕೆದಿಲ ಬೀಟಿಗೆ ಹಾಲಿನ ಸೊಸೈಟಿ ಮೂಲಕ ಕಾಂತುಕೋಡಿ ಆಗಿ ಪಡೀಲಿಗೆ ಸಂಪರ್ಕ ಮಾಡುವ ರಸ್ತೆಯ ಕಾಂತುಕೋಡಿ ಎಂಬಲ್ಲಿನ ಸೇತುವೆಯೊಂದು ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಮುಳುಗಡೆಯಾಗಿದೆ.
ಈ ಸೇತುವೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕ್ ಅಪ್ ಚಾಲಕರೋರ್ವರು ತಮ್ಮ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು, ಸೇತುವೆಯ ಮಧ್ಯದಲ್ಲಿ ಸಿಲುಕಿಕೊಂಡಿದೆ. ಕ್ಷಣದಿಂದ ಕ್ಷಣಕ್ಕೆ ನೀರಿನಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ವಾಸಿಗಳು ಅದರೊಳಗಡೆ ಸಿಲುಕಿರುವವರನ್ನು ರಕ್ಷಣೆ ಮಾಡಿದ್ದಾರೆ. ಪಿಕ್ ಅಪ್ ವಾಹನವು ಪಡೀಲು ಬಾಗದಿಂದ ಕೆದಿಲ ಭಾಗಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಪ್ರತೀ ವರ್ಷ ಮಳೆ ಬಂದಾಗ ಈ ಸೇತುವೆ ಮುಳುಗಡೆಯಾಗುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.