ಮಂಗಳೂರು : ಖಾಸಗಿ ಬಸ್ ಚಾಲಕನೊಬ್ಬ ಕೈಯಲ್ಲಿ ಮೊಬೈಲ್ ನೋಡುತ್ತಾ ಬಸ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಇದೀಗ ಈ ಕುರಿತಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಈ ಬಗ್ಗೆ ಪ್ರತಿಕ್ರಿಯಿಸಿ, ತಪ್ಪಿತಸ್ಥ ಬಸ್ ಚಾಲಕನ ವಿರುದ್ಧ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆ ಕ್ರಮ ಕೈಗೊಂಡಿದೆ. ಅಲ್ಲದೇ ಚಾಲಕನ ಡಿಎಲ್ ಅನ್ನು ರದ್ದುಗೊಳಿಸುವಂತೆ ಆರ್‌ಟಿಒಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. 42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಮೊಬೈಲ್ ಉಪಯೋಗಿಸುತ್ತ ಬಸ್ ಚಲಾಯಿಸಿದ್ದಾನೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ ಮೊಬೈಲ್ ಹಿಡಿದುಕೊಂಡು ಬಸ್ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಸ್ನಲ್ಲಿ ಅಧಿಕ ಪ್ರಯಾಣಿಕರಿದ್ದರು ಎಂಬುದನ್ನು ವಿಡಿಯೋ ಮಾಡಿದ ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಿಂತ ಹೆಚ್ಚಾಗಿ ಮೊಬೈಲ್ ಅನ್ನೇ ಚಾಲಕ ವೀಕ್ಷಿಸುತ್ತಿರುವುದು ಜನರ ಕಳವಳಕ್ಕೆ ಕಾರಣವಾಗಿದೆ. ಸಾರಿಗೆ ಅಧಿಕಾರಿಗಳು ಬಸ್ ಪರ್ಮಿಟ್ ರದ್ದುಗೊಳಿಸಬೇಕು ಹಾಗೂ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.