ಉಡುಪಿ: ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡೀಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿದೆ ಎಂದು ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಚ್ಚೇಂದ್ರ ತಿಳಿಸಿದ್ದಾರೆ. ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಮಾಡಿ ಡಿಲೀಟ್ ಆದ ಬಗ್ಗೆ ಮೂವರು ವಿದ್ಯಾರ್ಥಿನಿಯರು ಮತ್ತು ಕಾಲೇಜು ಆಡಳಿತ ಮಂಡಳಿಯವರ ವಿರುದ್ಧ , ಮಹಿಳೆಯ ಮಾನಕ್ಕೆ ಕುಂದುಂಟುಮಾಡುವ ಕೃತ್ಯ , ವ್ಯಕ್ತಿಯ ಖಾಸಗಿ ಚಿತ್ರವನ್ನು ಚಿತ್ರೀಕರಿಸುವ ಕೃತ್ಯ ಅಡಿಯಲ್ಲಿ ಮಲ್ಪೆ ಠಾಣಾ ಪಿಎಸ್ ಐ ಯವರು ಸ್ವಯಂ ಪ್ರೇರಿತವಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನೇತ್ರ ಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಮೂಲಕ ವಿಡಿಯೋ ಚಿತ್ರೀಕರಿಸಿ ಫಾರ್ವಡ್ ಮಾಡಿದ್ದಾರೆ ಎಂದು ಎಡಿಟ್ ಮಾಡಿದ ವಿಡಿಯೋ ಯೂ-ಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಆಗಿದ್ದು ಅದನ್ನು ಕಾಲು ಸಿಂಗ್ ಚೌಹಾಣ್ ಎಂಬ ವ್ಯಕ್ತಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ಷೇಪಾರ್ಹ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಕಂಡು ಬಂದಿದೆ. ಆದುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮು ದ್ವೇಷ ಉಂಟು ಮಾಡಿ ಸೌಹಾರ್ದತೆಗೆ ಧಕ್ಕೆಯುಂಟಾಗುವ ಕೃತ್ಯದ ಅಡಿಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.