ಮೂಡುಬಿದಿರೆ: ಮೂಡುಬಿದಿರೆಯ ರಾಜೀವ ಗಾಂಧಿ ಸಂಕೀರ್ಣದ ಎದುರು ತನ್ನ ಸಹಪಾಠಿ ವಿದ್ಯಾರ್ಥಿನಿ ಜೊತೆ ಅನ್ಯ ಮತೀಯ ವಿದ್ಯಾರ್ಥಿಯೋರ್ವ ಮಾತನಾಡಿದ ಎನ್ನುವ ಕಾರಣಕ್ಕೆ ಆತನ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಈ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಸಂಜಯ್, ಅಭಿಲಾಷ್ , ಪ್ರೇಮ್ ಪ್ರಕರಣ ದಾಖಲಾದ ಮೂವರು ಆರೋಪಿಗಳು ಎಂದು ಗುರುತಿಸಲಾಗಿದೆ.
ಮೂಡುಬಿದಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಬೆಂಗಳೂರಿಗೆ ಹೋಗಲು ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಎದುರು ನಿಂತಿದ್ದಳು.
ಅದೇ ಸಮಯದಲ್ಲಿ ಆಕೆಯ ಸಹಪಾಠಿ ಕೋಟೆಬಾಗಿಲು ಸಮೀಪದ ವಿದ್ಯಾರ್ಥಿ ಆಕೆಯೊಂದಿಗೆ ಮಾತನಾಡಿದ್ದಾನೆ ಎನ್ನಲಾಗಿದೆ.
ಅನ್ಯ ಮತೀಯ ಯುವಕ ಹಿಂದೂ ಯುವತಿ ಜೊತೆ ಸಲುಗೆಯಿಂದ ಮಾತನಾಡಿದ್ದಾನೆ ಎಂದು ಕೆರಳಿದ ಗುಂಪೊಂದು ಯುವತಿ ಬಸ್ ಹತ್ತಿದ ಬಳಿಕ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.
ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬುಧವಾರ ಜಿಲ್ಲಾಧಿಕಾರಿಗಳು ಇಲ್ಲಿನ ತಾಲೂಕು ಕಚೇರಿಗೆ ಭೇಟಿ ನೀಡಿದ್ದು, ಈ ಸಂದರ್ಭ ಮುಸ್ಲಿಂ ಸೆಂಟ್ರಲ್ ಕಮಿಟಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕಾಗಿ ಆಗ್ರಹಿಸಿದೆ.
ಸದ್ಯ ಈ ಪ್ರಕರಣ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತಾಕತ್ತು ಪ್ರದರ್ಶಿಸಲು ಮುಂದಾದ ಹಾಗೆ ಕಂಡು ಬರ್ತಾ ಇದೆ.