ಬೆಳಗಾವಿ ಮಕ್ಕಳು ಅಂತ್ಯಕ್ರಿಯೆಗೆ ಬರಲು ಒಪ್ಪದ ಕಾರಣ ಪೊಲೀಸರು ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಯೇ ವ್ಯಕ್ತಿಯೋರ್ವರ ಅಂತ್ಯಕ್ರಿಯೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೊಳ್ಳಿಯಲ್ಲಿ ಘಟನೆ ನಡೆದಿದೆ ಮೂಲಚಂದ್ರ ಶರ್ಮಾ (72) ಮೃತರು. ಮೂಲತಃ ಮಹಾರಾಷ್ಟ್ರದ ಪುಣೆಯವರು.ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು.
ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದು ಅವರು ವಿದೇಶದಲ್ಲಿ ನೆಲೆಸಿದ್ದಾರೆ.ಪತ್ನಿ ತೀರಿಕೊಂಡ ನಂತರ ಒಬ್ಬಂಟಿಯಾಗಿ ಬಳಿಕ ಪಾರ್ಶ್ವವಾಯು ಪೀಡಿತರಾಗಿದ್ದರು.
ಮೂಲಚಂದ್ರ ಶರ್ಮಾ ಅವರಿಗೆ ಚಿಕಿತ್ಸೆ ಕೊಡಿಸಲು ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿಯ ಆಸ್ಪತ್ರೆಗೆ ಒಂದೂವರೆ ತಿಂಗಳ ಹಿಂದೆ ಕರೆತರಲಾಗಿತ್ತು.ಆದರೆ ಅವರನ್ನು ಕರೆತಂದ ವ್ಯಕ್ತಿ ಅಲ್ಲಿನ ಲಾಡ್ಜ್‌ನಲ್ಲಿಯೇ ಬಿಟ್ಟು ಪರಾರಿಯಾಗಿದ್ದ.
ಈ ವಿಷಯ ಪಿಎಸ್‌ಐ ಬಸಗೌಡ ನೇರ್ಲಿ ಹಾಗೂ ಚಿಕ್ಕೋಡಿ ಪೊಲೀಸ್ ಠಾಣೆ ಸಿಬ್ಬಂದಿ ಗಮನಕ್ಕೆ ಬಂದಿತು. ಅವರು ಅಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಚಿಕಿತ್ಸೆಗೆ ಸ್ಪಂದಿಸದೆ ವೃದ್ಧ ಮೃತಪಟ್ಟಿದ್ದಾರೆ.
ಅಂತ್ಯಕ್ರಿಯೆಗೆ ವಿದೇಶಗಳಲ್ಲಿ ನೆಲೆಸಿರುವ ಅವರ ಮಕ್ಕಳು ಬರಲು ನಿರಾಕರಿಸಿದ್ದರಿಂದ ಸ್ಥಳೀಯ ಪೊಲೀಸರು, ಅಧಿಕಾರಿಗಳು ಸೇರಿ ನಾಗರಮುನ್ನೋಳಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿಡಿಒ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.