ಚೈತ್ರಾ ಕುಂದಾಪುರ ಗ್ಯಾಂಗ್ ನಡೆಸಿದ ಐದು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ದಾಖಲಾದ ದಿನದಿಂದಲೇ ನಾಪತ್ತೆಯಾಗಿದ್ದ ಸ್ವಾಮೀಜಿ ಈಗ ಸೆರೆಸಿಕ್ಕಿದ್ದು ಒಡಿಶಾ ರಾಜ್ಯದ ಕಟಕ್‌ನಲ್ಲಿ! ಅಂದರೆ ಊರು ಬಿಟ್ಟು ಎಲ್ಲಾದರೂ ಹೋಗಿ ತಪ್ಪಿಸಿಕೊಳ್ಳುತ್ತೇನೆ ಎಂದು ಹೊರಟಿದ್ದ ಅವರು ಈಗ ಸಿಸಿಬಿಯ ಕೈಗೆ ಸಿಕ್ಕಿಬಿದ್ದಿದ್ದಾರೆ.
ಉದ್ಯಮಿ ಗೋವಿಂದ ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವ ಚೈತ್ರಾ ಕುಂದಾಪುರ ಗ್ಯಾಂಗ್‌ನ ವಂಚನಾ ಜಾಲದಲ್ಲಿ ಪ್ರಮುಖ ಕೊಂಡಿ ಈ ಸ್ವಾಮೀಜಿ. ಗೋವಿಂದ ಪೂಜಾರಿಯಿಂದ ನೇರವಾಗಿ 1.5 ಕೋಟಿ ರೂ. ಸ್ವೀಕರಿಸಿದ್ದ ಸ್ವಾಮೀಜಿ ಪ್ರಕರಣ ಕುತ್ತಿಗೆಗೆ ಬರುತ್ತದೆ ಎಂದು ಹೇಳುವಾಗ ಕಂತು ಕಂತಿನಲ್ಲಿ ನಿಮ್ಮ ಹಣ ವಾಪಸ್ ಮಾಡುತ್ತೇನೆ ಎಂದು ಅಂಗಲಾಚಿದ್ದರು. ಆದರೆ, ಗೋವಿಂದ ಪೂಜಾರಿ ಕೇಸು ದಾಖಲಿಸಿಯೇಬಿಟ್ಟಾಗ ತಲೆಮರೆಸಿಕೊಂಡರು.
ಗೋವಿಂದ ಪೂಜಾರಿಯನ್ನು ಮಠಕ್ಕೆ ಕರೆಸಿಕೊಂಡು ಮಾತನಾಡಿ, ಬೆಂಗಳೂರಿನ ಆಶ್ರಮದಲ್ಲಿ ಹಣ ಸ್ವೀಕರಿಸಿದ್ದ ಸ್ವಾಮೀಜಿ ಈ ಹಣವನ್ನು ಬಳಸಿಕೊಂಡು ಪೆಟ್ರೋಲ್ ಪಂಪ್, ಜಾಗ ಮತ್ತು ಕಾರು ಖರೀದಿಸಿದ್ದರು. ಗೋವಿಂದ ಪೂಜಾರಿ ದೂರು ದಾಖಲಿಸುತ್ತೇನೆ ಎಂದಾಗ ಅದರಲ್ಲಿ 50 ಲಕ್ಷ ರೂ.ಯನ್ನು ವಾಪಸ್ ಕೊಟ್ಟಿದ್ದರೆನ್ನಲಾಗಿದೆ.
ಕಣ್ಮರೆಯಾಗಿದ್ದ ಹಾಲಶ್ರೀ ಸ್ವಾಮೀಜಿ ಒಂದು ಕಡೆ ಕಣ್ಮರೆಯಾಗಿದ್ರೂ ಇನ್ನೊಂದು ಕಡೆ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಯಾರೊಂದಿಗೋ ಅವರು ಕನೆಕ್ಷನ್‌ನಲ್ಲಿರುವುದು ಸ್ಪಷ್ಟವಾಗಿತ್ತು. ಪೊಲೀಸರು ಅವರ ಕಾರು ಚಾಲಕನನ್ನು ತಂದು ವಿಚಾರಣೆಗೆ ಒಳಪಡಿಸಿದ್ದರು. ಆತನ ಬಳಿ ಹೆಚ್ಚು ಮಾಹಿತಿ ಸಿಗಲಿಲ್ಲವಾದರೂ ಅವನ ಮೇಲೂ ಒಂದು ಕಣ್ಣಿಟ್ಟಿದ್ದರು. ಹೀಗಾಗಿ ಅವನ ಫೋನ್‌ಗೆ ಬಂದ ಕರೆಗಳ ಆಧಾರದಲ್ಲಿ ಸ್ವಾಮೀಜಿಯನ್ನು ಟ್ರ್ಯಾಕ್ ಮಾಡಲಾಯಿತು ಎನ್ನಲಾಗುತ್ತಿದೆ.
ಹಾಲಶ್ರೀ ಸ್ವಾಮೀಜಿ ಕೆಲವು ದಿನಗಳ ಕಾಲ ರಾಜ್ಯದಲ್ಲೇ ಇದ್ದರು. ಒಂದು ಕಡೆ ನಿರೀಕ್ಷಣಾ ಜಾಮೀನು ಸಿಗುತ್ತಿಲ್ಲ, ಇನ್ನೊಂದು ಕಡೆ ಪೊಲೀಸರು ಬಿಡುತ್ತಿಲ್ಲ ಎಂಬ ಕಾರಣದಿಂದ ಭಯಗೊಂಡು ಹೈದರಾಬಾದ್‌ಗೆ ಹೋಗಿದ್ದರು. ಅಲ್ಲಿಂದ ಒಡಿಶಾದ ಕಟಕ್, ಆ ನಂತರ ಬಿಹಾರಕ್ಕೆ ಹೋಗಿ ತಲೆ ಮರೆಸಿಕೊಳ್ಳುವ ಪ್ಲ್ಯಾನ್ ಹೊಂದಿದ್ದರು ಎನ್ನಲಾಗಿದೆ. ಆದರೆ, ಇದರ ಸುಳಿವು ಪಡೆದ ಸಿಸಿಬಿ ಪೊಲೀಸರು ಕಟಕ್‌ನಲ್ಲಿ ಅವರನ್ನು ವಶಕ್ಕೆ ಪಡೆದಿದೆ.
ಸಿಸಿಬಿಯ ಮೂರು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಹಾಲಶ್ರೀ ಪ್ರತಿ ಒಂದೊಂದು ಗಂಟೆಗೆ ಒಂದೊಂದು ಲೊಕೇಶನ್ ಚೇಂಜ್ ಮಾಡುತ್ತಿದ್ದುದರಿಂದ ಅವರು ಪರಾರಿಯಾಗುತ್ತಿರುವ ಸ್ಪಷ್ಟ ಸೂಚನೆ ಸಿಕ್ಕಿತ್ತು. ಈಗ ಲೊಕೇಶನ್‌ಗಳ ಆಧಾರದಲ್ಲಿ ಬಂಧಿಸಲಾಗಿದೆ.
ಒಡಿಶಾದಲ್ಲಿ ಬಂಧಿತರಾಗಿರುವ ಅಭಿವನ ಹಾಲಶ್ರೀಯನ್ನು ಈಗ ಅಲ್ಲಿನ ಪೊಲೀಸ್ ಠಾಣೆಗೆ ಹಾಜರುಪಡಿಸಿ ಬಳಿಕ ವಿಮಾನದ ಮೂಲಕ ಸಂಜೆ ವೇಳೆಗೆ ಬೆಂಗಳೂರಿಗೆ ಕರೆ ತರುವ ಸಾಧ್ಯತೆ ಇದೆ.