ಅಯೋಧ್ಯೆ: ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ14 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ವರದಿಯ ಪ್ರಕಾರ, ಬರೇಲಿಯ ಫತೇಗಂಜ್ ಪೂರ್ವದ ಇಟೌರಿಯಾ ನಿವಾಸಿಯಾಗಿರುವ 8 ನೇ ತರಗತಿ ವಿದ್ಯಾರ್ಥಿ ಸೆಪ್ಟೆಂಬರ್ 19 ರಂದು ಸಂಜೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಸೆಪ್ಟೆಂಬರ್ 21 ರಂದು ರಾಮ ಮಂದಿರವನ್ನು ಸ್ಫೋಟಿಸಲಾಗುವುದು ಎಂದು ಹೇಳಿದ್ದಾನೆ.
ಪೊಲೀಸರು ಆತನ ಹೆಸರು ವಿಳಾಸ ಕೇಳಿದಾಗ ಹೆದರಿ ಕರೆ ಡಿಸ್ ಕನೆಕ್ಟ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಲಕ್ನೋ ಪೊಲೀಸರು ಮತ್ತು ಅಯೋಧ್ಯೆ ಪೊಲೀಸರು ಜಂಟಿಯಾಗಿ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿ ಬರೇಲಿಯ ಹುಡುಗನನ್ನು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿಯು ತನ್ನ ಸ್ನೇಹಿತನೊಂದಿಗೆ ಯೂಟ್ಯೂಬ್ನಲ್ಲಿ ರಾಮಮಂದಿರವನ್ನು ಬಾಂಬ್ ಸ್ಫೋಟಿಸುವುದಾಗಿ ಹೇಳಿದ್ದ ವೀಡಿಯೊವನ್ನು ವೀಕ್ಷಿಸಿದ್ದನು ಮತ್ತು ಪೊಲೀಸರಿಗೆ ತಿಳಿಸಲು ಯೋಚಿಸಿದನು ಎಂದು ತಿಳಿದುಬಂದಿದೆ. ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.