ಗಾಂಧಿನಗರ: ಅಪರಾಧವೆಸಗಿ ಜೈಲು ಸೇರಿದ ವ್ಯಕ್ತಿಗಳು ಜಾಮೀನಿಗಾಗಿ ಕಾತರಿಸುವುದು ಸಾಮಾನ್ಯ. ಜಾಮೀನು ಸಿಕ್ಕ ತಕ್ಷಣ ತಾತ್ಕಾಲಿಕವಾಗಿ ಬಿಡುಗಡೆ ಭಾಗ್ಯ ಪಡೆಯುತ್ತಾರೆ. ಆದರೆ ಗುಜರಾತ್‌ನಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ಜಾಮೀನು ಸಿಕ್ಕಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂರು ವರ್ಷಗಳವರೆಗೆ ಜೈಲಿನಲ್ಲೇ ಕಳೆದ ಘಟನೆ ವರದಿಯಾಗಿದೆ. ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ, ಇ-ಮೇಲ್‌ನಲ್ಲಿ ಬಂದಿರುವ ಆದೇಶದ ಪ್ರತಿಯನ್ನು ಅಧಿಕಾರಿಗಳು ತೆರೆಯದ ಕಾರಣ ಆರೋಪಿ ಮೂರು ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ನ್ಯಾಯಾಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಗಳ ನಿರ್ಲಕ್ಷ್ಯದಿಂದ ವಿನಾಕಾರಣ ಜೈಲಿನಲ್ಲಿ ಕೊಳೆಯುವಂತಾದ ಆರೋಪಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ. ಗುಜರಾತ್ ಮೂಲದ ಚಂದನ್‌ಜಿತ್ ಠಾಕೂರ್ (27) ಎಂಬ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ. 2020ರ ಸೆ 29ರಂದು ಗುಜರಾತ್ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿತಲ್ಲದೆ, ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿಯಿಂದ ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ಇ-ಮೇಲ್ ಮೂಲಕ ರವಾನೆಯಾಗಿತ್ತು. ಆದರೆ ಜೈಲು ಅಧಿಕಾರಿಗಳಿಗೆ ಇ-ಮೇಲ್‌ನಲ್ಲಿ ಲಗತ್ತಿಸಲಾದ ಆದೇಶ ಪ್ರತಿಯನ್ನು ತೆರೆಯಲು ಗೊತ್ತಾಗಿರಲಿಲ್ಲ. ಇದರಿಂದಾಗಿ ಆರೋಪಿ ಜಾಮೀನು ಸಿಕ್ಕರೂ ಆ ವಿಷಯ ತಿಳಿಯದೆ 2023ರವರೆಗೆ ಜೈಲಿನಲ್ಲೇ ಜೀವನ ಕಳೆದಿದ್ದಾನೆ. ಇದೀಗ ಜಾಮೀನಿಗಾಗಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅಧಿಕಾರಿಗಳ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ.
2020ರ ಸೆ 29ರಂದು ಜಾಮೀನು ಪಡೆದಿದ್ದ ಚಂದನ್ ಠಾಕೂರ್, 2023ರ ಸೆ 21ರಂದು ಕೊನೆಗೂ ಜೈಲಿನಿಂದ ಹೊರ ಬಂದಿದ್ದಾನೆ. ನ್ಯಾಯಮೂರ್ತಿ ಎಎಸ್ ಸುಪೇಹಿಯಾ ಮತ್ತು ನ್ಯಾ ಎಂಆರ್ ಮೆಂಗ್ಡೆ ಅವರನ್ನು ಒಳಗೊಂಡ ಗುಜರಾತ್ ಹೈಕೋರ್ಟ್ ನ್ಯಾಯಪೀಠ, 35 ಪುಟಗಳ ಆದೇಶ ನೀಡಿದೆ.
ಜಾಮೀನು ಆದೇಶದ ಕುರಿತು ಹೈಕೋರ್ಟ್ ರಿಜಿಸ್ಟ್ರಿ ಜೈಲು ಅಧಿಕಾರಿಗಳಿಗೆ ಇ- ಮೇಲ್ ಮೂಲಕ ಮಾಹಿತಿ ನೀಡಿತ್ತು. “ಇದು ಜೈಲು ಅಧಿಕಾರಿಗಳಿಗೆ ಇ- ಮೇಲ್ ತಲುಪದ ಪ್ರಕರಣವಲ್ಲ. ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗದ ಪ್ರಕರಣವಿದು. ಅವರಿಗೆ ಇ- ಮೇಲ್ ಬಂದಿದ್ದರೂ, ಅದರಲ್ಲಿ ಲಗತ್ತಿಸಲಾಗಿದ್ದ ಕಡತವನ್ನು ತೆರೆಯುವುದು ಅವರಿಗೆ ಸಾಧ್ಯವಾಗಿಲ್ಲ” ಎಂದು ಕೋರ್ಟ್ ಹೇಳಿದೆ.ಜಾಮೀನು ಆದೇಶದ ವಿವರ ಇರುವ ಇ ಮೇಲ್ ಅನ್ನು ಮೆಹ್ಸಾನಾದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಕಳುಹಿಸಿದರೂ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಜೈಲಿನ ದಾಖಲೆಗಳ ಪ್ರಕಾರ ಚಂದನ್‌ಜಿತ್ ಠಾಕೂರ್ ಐದು ವರ್ಷಕ್ಕೂ ಹೆಚ್ಚು ಸಮಯವನ್ನು ಜೈಲಿನಲ್ಲಿ ಕಳೆದಿದ್ದಾನೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಎಎಸ್ ಸುಪೇಹಿಯಾ ಮತ್ತು ನ್ಯಾಯಮೂರ್ತಿ ಎಂ ಆರ್ ಮೆಂಗ್ಡೆ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಜೈಲು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಂಡ ವಿಧಿಸಿದೆ. 14 ದಿನಗಳಲ್ಲಿ 1 ಲಕ್ಷ ರೂ ಪರಿಹಾರವನ್ನು ಪಾವತಿಸಲು ಆದೇಶಿಸಿದೆ.