ಮಂಗಳೂರು: ಕ್ರೆಡಿಟ್ ಕಾರ್ಡ್ನಿಂದ ಅನಧಿಕೃತವಾಗಿ 1.55 ಲಕ್ಷ ರೂ. ಗಳನ್ನು ವರ್ಗಾಯಿಸಿ ವಂಚಿಸಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ತಾನು ಐಸಿಐಸಿಐ ಕ್ರೆಡಿಟ್ಕಾರ್ಡ್ ಹೊಂದಿದ್ದು, ತನ್ನ ಮೊಬೈಲ್ಗೆ ಸೆ.10ರಂದು ಹಲವು ಒಟಿಪಿಗಳ ಸಂದೇಶ ಬಂದಿದ್ದವು. ಅಲ್ಲದೇ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಆದರೆ ತಾನು ಯಾವುದೇ ಕರೆ ಸ್ವೀಕರಿಸದೆ ತನ್ನ ಮೊಬೈಲ್ ನಿಂದ ಐಸಿಐಸಿಐ ಆ್ಯಪ್ ತೆರೆದು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿದ್ದೆ. ಅಲ್ಲದೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಕಸ್ಟಮರ್ ಕೇರ್ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದೆ. ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಇಮೇಲ್ ಕೂಡ ಬಂದಿತ್ತು. ಮರುದಿನ ರಾತ್ರಿ ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್ ಸ್ಟೇಟಸ್ ನೋಡಿದಾಗ 1,60,401 ರೂ. ಔಟ್ ಸ್ಟಾಂಡಿಂಗ್ ಇರುವುದಾಗಿ ತೋರಿಸಿತು. ಕೂಡಲೇ ಕಸ್ಟಮರ್ ಕೇರ್ಗೆ ಕರೆ ಮಾಡಿ ವಿಚಾರಿಸಿದಾಗ ಯಾರೋ ಅಪರಿಚಿತರು ಆನ್ಲೈನ್ ಮೂಲಕ ಮೋಸದಿಂದ 1.55 ಲಕ್ಷ ರೂ.ಗಳನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿಸಿರುವುದಾಗಿ ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.