ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ರೈಲ್ವೆ ಪೊಲೀಸರು ದೂರು ದಾಖಲಾದ ನಾಲ್ಕೇ ತಾಸಿನೊಳಗೆ ಬಂಧಿಸಿದ್ದಾರೆ. ದಿಲ್ಲಿಯ ನಿವಾಸಿ ಸನ್ನಿ ಮಲ್ಹೋತ್ರಾ (30) ಬಂಧಿತ ಆರೋಪಿಯಾಗಿದ್ದಾನೆ.
ಮಹಿಳೆಯ ಬ್ಯಾಗಿನಲ್ಲಿ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳಿದ್ದವು. ಕಳ್ಳನ ಬಳಿ 6,75,000 ರೂ. ಮೌಲ್ಯದ 93.17 ಗ್ರಾಂ ತೂಕದ ನಾಲ್ಕು ಚಿನ್ನದ ಸರಗಳು, 3,700 ರೂ ನಗದು ಮತ್ತು ಎಟಿಎಂ ಕಾರ್ಡ್ ದೊರೆತಿದೆ.
ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣಿ ಬಾಲಕೃಷ್ಣನ್ ಎಂಬ ಮಹಿಳೆ ಬುಧವಾರ S7 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬ್ಯಾಗ್ ತೋಕೂರು ನಿಲ್ದಾಣದ ಬಳಿ ಕಳ್ಳತನವಾಗಿತ್ತು. ಈ ಕುರಿತು ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಉಡುಪಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಕುಲಿತಿರುವುದು ಕಂಡು ಬಂದಿದೆ.
ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ ಆತನೇ ಕಳ್ಳ ಎಂದು ಖಾತರಿಯಾಗಿದ್ದು ಕದ್ದ ಚಿನ್ನಾಭರಣಗಳೂ ಅವನ ಬಳಿಯಿದ್ದವು.
ಮಡಗಾಂವ್‌ಗೆ ಪ್ರಯಾಣಿಸಲು ಟಿಕೆಟ್ ತೆಗೆದಿದ್ದ ಆತ ಮಹಿಳೆಯ ಬ್ಯಾಗ್ ಕದ್ದು ತೋಕೋರಿನಲ್ಲಿ ರೈಲು ನಿಧಾನವಾದಾಗ ಇಳಿದು ಮತ್ತೊಂದು ರೈಲು ಹತ್ತಿ ಉಡುಪಿ ನಿಲ್ದಾಣ ಬಂದಿಳಿದಿದ್ದ.
ಇಲ್ಲಿಂದ ವಾಪಸ್ ಕೇರಳದತ್ತ ಹೋಗುವ ರೈಲು ಏರುವ ಸಿದ್ದತೆಯಲ್ಲಿದ್ದ. ಬ್ಯಾಗನ್ನು ಪೊದೆಗೆ ಎಸೆದು ಅದರಲ್ಲಿದ್ದ ಚಿನ್ನ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತನ್ನ ಬ್ಯಾಗಿಗೆ ಹಾಕಿಕೊಂಡಿದ್ದ.