ಮಂಗಳೂರು: ಸೈಬರ್ ಅಪರಾಧಿಗಳಿಗೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಸೆನ್ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಪಿರ್ಯಾದಿದಾರರಿಗೆ ಅಪಚಿರಿತ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂದು ನಂಬಿಸಿ ಹಂತ ಹಂತವಾಗಿ ಒಟ್ಟು 77,96,322.08 ರೂ. ಹಣ ಪಡೆದು ವಂಚನೆಗೈದಿದ್ದ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ 108/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ 318(4),3(5) ಬಿ.ಎನ್.ಎಸ್ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಪಿರ್ಯಾದಿದಾರರಿಂದ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿದಾಗ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಗೆ 26,27,114.4ರೂ. ಹಣ ವರ್ಗಾವಣೆಯಾಗಿದ್ದು ತಿಳಿದು ಬಂದಿದೆ. ಸದ್ರಿ ಬ್ಯಾಂಕ್ ಖಾತೆಯಿಂದ ಕೇರಳ ರಾಜ್ಯದ ವಲಿಯ ಪರಂಬತ್ ಮೂಲದ ಉಮ್ಮರ್ (41) ಎಂಬಾತನ ಬ್ಯಾಂಕ್ ಖಾತೆಗೆ ರೂ,6,00,000/- ರೂ ಹಣ ವರ್ಗಾವಣೆಯಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡಾಗ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪತಾಯಕುನ್ನುವಿನ ರಿಯಾಸ್ ಎಂ.ವಿ(45) ಎಂಬಾತ ಈ ಹಣ ವರ್ಗಾವಣೆ ಮಾಡಿಸಿದ್ದು ಎಂದು ತಿಳಿದು ಬಂದಿದೆ. ಹಣ ವಿಥ್ ಡ್ರಾ ಮಾಡಿಕೊಟ್ಟಲ್ಲಿ ಕಮಿಷನ್ ನೀಡುವುದಾಗಿ ತಿಳಿಸಿ 6,00,000 ಲಕ್ಷ ರೂ. ಹಣ ವಿಥ್ ಡ್ರಾ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಸದ್ರಿ ಪ್ರಕರಣದಲ್ಲಿ ಭಾಗಿಯಾದ ಈ ಇಬ್ಬರು ಕೇರಳ ಮೂಲದ ವ್ಯಕ್ತಿಗಳನ್ನು ಪತ್ತೆ ಮಾಡಿ ದಸ್ತಗಿರಿ ಕ್ರಮ ಜರುಗಿಸಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.