“ಪೈಪ್ ಲೈನ್ ಗಾಗಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದು ಜನರಿಗೆ ತೊಂದರೆ ಉಂಟುಮಾಡಿದರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಿಸ್ತೀನಿ” ಹೀಗೆಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಗೇಲ್ ಕಂಪೆನಿಯ ಅಧಿಕಾರಿಗಳಿಗೆ ಬಹಿರಂಗ ಎಚ್ಚರಿಕೆ ನೀಡಿದ ಘಟನೆ ಬುಧವಾರ ನಡೆಯಿತು.
ದೇರೆಬೈಲ್ ಕೊಂಚಾಡಿ ಬಳಿ ರಸ್ತೆ ಕಾಮಗಾರಿಯ ಗುದ್ದಲಿಪೂಜೆಗೆ ಬಂದಿದ್ದ ಶಾಸಕರಲ್ಲಿ ಸ್ಥಳೀಯರು ಗೇಲ್ ಕಂಪೆನಿ ಅಧಿಕಾರಿಗಳು ಎಲ್ಲೆಂದರಲ್ಲಿ ರಸ್ತೆಯನ್ನು ಅಗೆಯುತ್ತಿದ್ದು ಇದರಿಂದ ನೀರಿನ ಪೈಪ್ ಒಡೆದು ಸಮಸ್ಯೆ ಸೃಷ್ಟಿಯಾಗಿದೆ ಎನ್ನುವುದನ್ನು ಗಮನಕ್ಕೆ ತಂದರು.
ಈ ವೇಳೆ ಸ್ಥಳದಲ್ಲೇ ಇದ್ದ ಕಂಪೆನಿ ಅಧಿಕಾರಿಗಳನ್ನು ಕರೆದ ಶಾಸಕರು, “ಬೇಕಾಬಿಟ್ಟಿ ಕಾಮಗಾರಿ ಮಾಡಬೇಡಿ, ಏನೇ ಮಾಡೋದಿದ್ರೂ ಸ್ಥಳೀಯ ಕಾರ್ಪೋರೇಟರ್ ಹಾಗೂ ಸಾರ್ವಜನಿಕರ ಗಮನಕ್ಕೆ ತಂದು ಬಳಿಕ ಮಾಡಿ. ನಿಮ್ಮಿಂದಾಗಿ ನಗರ ಪಾಲಿಕೆಯ ಎಲ್ಲಾ ಕಡೆಗಳಲ್ಲಿ ಸಮಸ್ಯೆಯಾಗುತ್ತಿದೆ. 10-15 ದಿನಗಳು ನೀರಿಲ್ಲದಿದ್ದರೆ ಜನರು ಏನು ಮಾಡಬೇಕು? ಅಲ್ಲಲ್ಲಿ ಅಗೆದು ಗುಂಡಿಯನ್ನು ಹಾಗೇ ಬಿಟ್ಟಿದ್ದೀರಿ. ನನ್ನ ಕ್ಷೇತ್ರದಲ್ಲಿ ಒಬ್ಬ ದ್ವಿಚಕ್ರ ಸವಾರರು ಗುಂಡಿಗೆ ಬಿದ್ದು ಅನಾಹುತ ಆದ್ರೂ ಸುಮ್ಮನಿರಲ್ಲ. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕ್ತೀನಿ” ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಕಂಪೆನಿ ಅಧಿಕಾರಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.