ಬಂಟ್ವಾಳ: ಡಿ. 29ರಂದು ಎರಡು ತಂಡಗಳು ಹೊಡೆದಾಡಿದ ಘಟನೆ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲಿನಲ್ಲಿ ನಡೆದಿದೆ. ಒಂದು ತಂಡದಿಂದ ತೇಜಾಕ್ಷ ಎಂಬವರು ದೂರು ನೀಡಿದರೇ. ಇನ್ನೊಂದು ತಂಡದಿಂದ ಸುಲೈಮಾನ್ ಎಂಬವರು ದೂರು ನೀಡಿದ್ದಾರೆ.
ಘಟನೆಯ ಹಿನ್ನಲೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಘಟನೆಯ ಕುರಿತು ಜಿಲ್ಲಾ ಎಸ್‌ಪಿ ಯತೀಶ್ ಅವರು ಗ್ರಾಮಾಂತರ ಠಾಣೆಗೆ ಭೇಟಿ ನೀಡಿ ತನಿಖೆಯ ಕುರಿತು ಸಲಹೆ ನೀಡಿದ್ದಾರೆ.
ಡಿ. 29ರಂದು ಮಧ್ಯಾಹ್ನ ತಾರಿಪಡ್ಡು ನಿವಾಸಿ ತೇಜಾಕ್ಷ ಅವರು ಮನೆಗೆ ಹೋಗುತ್ತಿದ್ದ ವೇಳೆ ಪರಿಚಯದ ಉಮೇಶ ಎಂಬವನಿಗೆ ತಂಡವೊಂದು ಹೊಡೆಯುತ್ತಿದ್ದು, ಈ ವೇಳೆ ತೇಜಾಕ್ಷ ಅಲ್ಲಿಗೆ ಹೋಗಿ ಉಮೇಶನಿಗೆ ಯಾಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದು, ಪರಿಚಯದ ಆರೋಪಿಗಳಾದ ಮುಸ್ತಾ, ನವಾಜ್, ರಜಿಂ ಮತ್ತು ಇತರರು ಸೇರಿ ನೀನು ಯಾರು ನಮ್ಮನ್ನು ಕೇಳಲು ಎಂದು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಆ ಸಮಯ ಅಲ್ಲಿಗೆ ಬಂದ ಸುಲೈಮಾನ್ ಕೂಡಾ ನನ್ನ ಮಕ್ಕಳಿಂದಲೇ ನಿನ್ನನ್ನು ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ. ಘಟನೆಯಿಂದ ತೇಜಾಕ್ಷರ ಕೈಗಳಿಗೆ, ಕಾಲುಗಳಿಗೆ, ತಲೆಯ ಎಡಭಾಗಕ್ಕೆ ತರಚಿದ ಮತ್ತು ಗುದ್ದಿದ ಗಾಯವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಕುರಿತು ಪಲ್ಲಿಪಾಡಿ ನಿವಾಸಿ ಸುಲೈಮಾನ್ ಕೂಡ ದೂರು ನೀಡಿದ್ದು, ಅವರು ಕೊಳತ್ತಮಜಲು ಎಂಬಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಲು ಮನೆಯಿಂದ ಬಂದು ಕೊಳತ್ತಮಜಲು ಎಂಬಲ್ಲಿರುವ ಹರೀಶ ಎಂಬವರ ಸೆಲೂನ್ ಮುಂಭಾಗದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯಾಹ್ನ 1.15 ಗಂಟೆಗೆ ಉಮೇಶ ಎಂಬವನು ಬಂದು ಸುಲೈಮಾನ್ ರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಾಲರ್ ಪಟ್ಟಿ ಹಿಡಿದು ಎಳೆದು ಹಾಕಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಆ ಸಮಯ ಅಲ್ಲಿಗೆ ಬಂದ ತೇಜಾಕ್ಷ ಎಂಬವನು ಕೂಡಾ ಬಾರಿ ಗಲಾಟೆ ಮಾಡುತ್ತೀಯಾ ಎಂದು ಹೇಳಿ ಕೈಯಿಂದ ಹೊಡೆದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು.
ಅವರಿಬ್ಬರ ಹಲ್ಲೆಯಿಂದ ಸುಲೈಮಾನಿಗೆ ಬಲ ಕೈಯ ಗಂಟಿಗೆ ತರಚಿದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು. ಈ ಬಗ್ಗೆ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ಉಮೇಶನಿಗೆ ಈ ಹಿಂದೆ ಹಣಕಾಸಿನ ವಿಚಾರದಲ್ಲಿ ತಕರಾರು ಆಗಿದ್ದು, ಇದೇ ದ್ವೇಷದಿಂದ ಉಮೇಶ ಹಲ್ಲೆ ನಡೆಸಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.