ಪುತ್ತೂರು: ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಗು ಸೇರಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಹೊರವಲಯದ ಮುರ ಜಂಕ್ಷನ್ ಸಮೀಪ ಸಂಭವಿಸಿದೆ.

ಗಾಯಾಳುಗಳನ್ನು ಅಂಡೆಪುನಿ ನಿವಾಸಿ ಈಶ್ವರ್ ಭಟ್, ಅವರ ಮಗಳು ಅಪೂರ್ವ ಹಾಗೂ ಮೊಮ್ಮಗು ಎಂದು ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ ಈಶ್ವರ್ ಭಟ್ ಅಂಡೆಪುನಿ ಅವರ ಮನೆಯಲ್ಲಿ ಇಂದು ಶ್ರಾದ್ಧ ಕಾರ್ಯಕ್ರಮದ ಹಿನ್ನೆಲೆ ಭಾಗವಹಿಸಲು ಅವರ ಮಗಳು ಅಪೂರ್ವ ಹಾಗೂ ಮೊಮ್ಮಗಳು ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ್ದರು. ಈಶ್ವರ್ ಭಟ್ ಅವರು ಪುತ್ತೂರು ಪೇಟೆಯಿಂದ ಇವರನ್ನು ತಮ್ಮ ಕಾರಿನಲ್ಲಿ ಮನೆಗೆ ಕರೆತರುತ್ತಿದ್ದ ವೇಳೆ, ಮುರ ಜಂಕ್ಷನ್ ಬಳಿ ಪಡೂರಿಗೆ ತೆರಳುವ ಒಳರಸ್ತೆಗೆ ಕಾರನ್ನು ತಿರುಗಿಸುತ್ತಿದ್ದರು.
ಈ ಸಂದರ್ಭದಲ್ಲಿ ಪುತ್ತೂರಿನಿಂದ ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್, ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ತಿಳಿದುಬಂದಿದೆ. ಅಪಘಾತ ನಡೆದ ಕೂಡಲೇ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ, ನಜ್ಜುಗುಜ್ಜಾಗಿದ್ದ ಕಾರಿನಿಂದ ಗಾಯಾಳುಗಳನ್ನು ಹೊರ ತೆಗೆದು ಅಪಘಾತದಲ್ಲಿ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.