ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎ ಒನ್ ಆರೋಪಿ ಆಗಿರುವ ರೆಹಮದ್ ಅಲಿಯಾಸ್ ಆಯೇಷಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವ ಸೋದರ, ಹೆಸರಾಂತ ಉದ್ಯಮಿ ಮುಮ್ತಾಜ್ ಆಲಿ ನಿಗೂಢ ಸಾವಿಗೆ ಬ್ಲಾಕ್ಮೇಲ್ ಮತ್ತು ಹನಿಟ್ರ್ಯಾಪ್ ಜಾಲವೇ ಕಾರಣ ಎನ್ನಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಸೂತ್ರಧಾರೆ ಎನ್ನಲಾದ ಮಹಿಳೆ, ಆಕೆಯ ಪತಿ ಮತ್ತು ಇನ್ನೊಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮುಮ್ತಾಜ್ ಸಾವಿಗೆ ಆರು ಮಂದಿಯ ತಂಡ ನಡೆಸಿದ ಬ್ಲಾಕ್ಮೇಲ್ ಕಾರಣ ಎಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಮಂಗಳೂರು ಸಿಸಿಬಿ ಪೊಲೀಸರು ಸೇರಿದಂತೆ ಎರಡು ವಿಶೇಷ ತಂಡ ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ಆಯೆಷಾ ರೆಹ್ಮತ್ ಮತ್ತು ಆಕೆಯ ಪತಿ ಶೋಯಿಬ್ ಹಾಗೂ ಸಿರಾಜ್ ಎಂಬವರನ್ನು ಕಲ್ಲಡ್ಕದಲ್ಲಿ ಬಂಧಿಸಿದ್ದಾಗಿ ತಿಳಿದುಬಂದಿದೆ. ಇದೇ ವೇಳೆ, ಅಬ್ದುಲ್ ಸತ್ತಾರ್ ಮತ್ತು ಶಾಫಿ ನಂದಾವರ ಸೇರಿದಂತೆ ಇತರ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸುರತ್ಕಲ್ ಬಳಿಯ ಕಾಟಿಪಳ್ಳ ನಿವಾಸಿ ಆಯೆಷಾ ರೆಹ್ಮತ್, ಮುಮ್ತಾಜ್ ಆಲಿಯವರು ನಡೆಸುತ್ತಿದ್ದ ಕಾಲೇಜಿನಲ್ಲಿ ಕೆಲಸಕ್ಕಿದ್ದ ಮಹಿಳೆ. ಈ ವೇಳೆ, ಮುಮ್ತಾಜ್ ಆಲಿಯವರ ಜೊತೆಗೆ ಹತ್ತಿರದ ಒಡನಾಟ ಇರಿಸಿಕೊಂಡಿದ್ದರು ಎನ್ನಲಾಗಿದೆ. ಇದೇ ನೆಪದಲ್ಲಿ ಆರೋಪಿ ಮಹಿಳೆ, ಮುಮ್ತಾಜ್ ಆಲಿಯವರನ್ನು ಬ್ಲಾಕ್ಮೇಲ್ ಮಾಡಲು ಮುಂದಾಗಿದ್ದು ಇದಕ್ಕೆ ಆಕೆಯ ಪತಿ ಶೋಯಿಬ್ ಸಹಕಾರ ನೀಡಿದ್ದ. ಅಲ್ಲದೆ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಸತ್ತಾರ್ ಮತ್ತು ಮರಳು ದಂಧೆಕೋರ ಶಾಫಿ ನಂದಾವರ ಸೇರಿಕೊಂಡು ಮುಮ್ತಾಜ್ ಆಲಿಯವರನ್ನು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಲು ತೊಡಗಿದ್ದರು. ಕಳೆದ 3-4 ತಿಂಗಳಿನಿಂದ 50 ಲಕ್ಷಕ್ಕೂ ಹೆಚ್ಚು ದುಡ್ಡನ್ನು ಪೀಕಿಸಿಕೊಂಡಿರುವ ಈ ತಂಡವು, ಎರಡು ಕೋಟಿ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿತ್ತು.
ಇದಲ್ಲದೆ, ಮುಮ್ತಾಜ್ ಆಲಿ ತನ್ನ ಮಗುವಿನ ಜೊತೆಗೆ ಆಟವಾಡುತ್ತಿದ್ದ ವಿಡಿಯೋವನ್ನು ಮಾಡಿ, ಆರೋಪಿಗಳು ಆಲಿಯವರ ಕುಟುಂಬಸ್ಥರಿಗೆ ಕಳಿಸತೊಡಗಿದ್ದರು. ಈ ವಿಡಿಯೋ ಕಾರಣದಿಂದ ಮುಮ್ತಾಜ್ ಆಲಿ ತನ್ನ ಕುಟುಂಬಸ್ಥರ ನಡುವೆ ನಿಂದನೆಗೆ ಒಳಗಾಗಿದ್ದರು. ಇದೇ ಹಿಂಸೆಯಿಂದಾಗಿ ಮುಮ್ತಾಜ್ ಆಲಿ ಸಾಯಲು ಮುಂದಾಗಿದ್ದು ಮೊನ್ನೆ ನಡುರಾತ್ರಿಯೇ ಮನೆ ಬಿಟ್ಟು ಬಂದಿದ್ದರು. ಇದೇ ಹಿಂಸೆಯಿಂದ ನಸುಕಿನ ಹೊತ್ತಿಗೆ ಕಾರನ್ನು ಕುಳೂರಿನ ಸೇತುವೆಯಲ್ಲಿ ಬಿಟ್ಟು ನದಿಗೆ ಹಾರಿ ದುರಂತ ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಆರು ಮಂದಿ ಬ್ಲಾಕ್ಮೇಲರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಉಳಿದವರ ಪತ್ತೆಗಾಗಿ ಬಲೆ ಬೀಸಿದ್ದಾರೆ