ಮಂಗಳೂರು: ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ, 2016ರಲ್ಲಿ ನಡೆದ ದೊಂಬಿ, ಗಲಾಟೆ ಗಲಭೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿ, ನಗರಕ್ಕೆ ಕರೆ ತಂದಿದ್ದಾರೆ.
ಮಂಗಳೂರಿನ ಬಜಾಲ್ ಪೈಜಲ್ ನಗರದ ನಿವಾಸಿ ತೌಸೀಫ್(27) ಬಂಧಿತ ಆರೋಪಿಯಾಗಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ದೊಂಬಿ, ಗಲಾಟೆ ಹಾಗೂ ಮಾರಣಾಂತಿಕ ಹಲ್ಲೆಯಂತಹ ಮೂರು ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ತೌಸೀಫ್, ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.
ವಿದೇಶದಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಈತನ ವಿರುದ್ಧ ಲುಕ್ ಔಟ್ ನೋಟೀಸ್ (ಎಲ್‌ಒಸಿ) ಹೊರಡಿಸಲಾಗಿತ್ತು.
ರಿಯಾದ್ ನಿಂದ ಮುಂಬೈ ನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಹಿತಿ ಸಿಕ್ಕಿದ ಪ್ರಕಾರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಮಂಗಳೂರಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.