ಮಂಗಳೂರು: ಜಮೀನಿನ ನಕಲಿ ದಾಖಲು ಪತ್ರಗಳನ್ನು ಸಲ್ಲಿಸಿ ಕೆಎಸ್‌ಎಫ್‌ಇಯ ಮಾಲಕಲ್ಲು ಶಾಖೆಯಿಂದ 70 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೊಸದುರ್ಗ ಚಿತ್ತಾರಿ ಪಿ.ವಿ. ರಸ್ತೆಯ ಕೆ.ವಿ.ಹೌಸ್ ನ ಎಂ. ಇಸ್ಮಾಯಿಲ್(37)ನನ್ನು ಗಡಿ ಭಾಗದ ಕಾಸಗೋಡು ಜಿಲ್ಲೆಯ ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಸ್ಮಾಯಿಲ್ ಸಹಿತ 8 ಮಂದಿ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ಗ್ರಾಮದ ಐದು ಎಕ್ರೆ ಜಮೀನಿನ ದಾಖಲು ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಅದಕ್ಕೆ ಗ್ರಾಮಾಧಿಕಾರಿಯ ಡಿಜಿಟಲ್ ಸಹಿಹಾಕಿ ನೀಡಿ ಕೆಎಸ್‌ಎಫ್‌ಇ ಚಿಟ್ ಫಂಡ್‌ನಿಂದ ಆರೋಪಿಗಳು 70 ಲಕ್ಷರೂ. ಸಾಲ ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಸಾಲವನ್ನು ಮರುಪಾವತಿಸದೆ ಇದ್ದಾಗ ಆರೋಪಿಗಳು ಸಲ್ಲಿಸಿದ ಭೂದಾಖಲು ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ ಎಂದು ಕೆಎಸ್‌ಎಫ್‌ಇಯ ಶಾಖಾ ಮೆನೇಜರ್ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದು ಇತರ ಆರೋಪಿಗಳ ಬಂಧನಕ್ಕೆ ಶೋಧ ನಡೆಯುತ್ತಿದೆ. ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.