ಮಂಗಳೂರು : ‘ಪೊಲೀಸ್ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ನಿರ್ದಿಷ್ಟ ಪ್ರಕರಣದ ಬಗ್ಗೆ ಪ್ರಾಮಾಣಿಕವಾಗಿ ದೂರು ನೀಡಿದರೆ ಆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಡಿಜಿಪಿ (ಕಾನೂನು ಸುವ್ಯವಸ್ಥೆ ) ಅಲೋಕ್ ಕುಮಾರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಪೊಲೀಸ್ ಕಾರ್ಯನಿರ್ವಹಣೆಗೆ ಸಂಬಂಧಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಬಳಿಕ ಅವರು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು.
‘ಪೊಲೀಸ್ ಅಧಿಕಾರಿಗಳ ವಿರುದ್ಧ ಎಷ್ಟು ಮಂದಿ ಆರೋಪ ಮಾಡಿದ್ದಾರೆ ಎನ್ನುವುದು ನಮಗೆ ಮುಖ್ಯವಲ್ಲ. ಆ ಆರೋಪಗಳನ್ನು ನಿರ್ದಿಷ್ಟಪಡಿಸಿದರೆ ತನಿಖೆ ನಡೆಸಬಹುದು. ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ದಿಷ್ಟ ದೂರುಗಳಿದ್ದರೆ ನೀಡಬಹುದು. ಇದೇ 11ರಂದು (ಶುಕ್ರವಾರ) ಬೆಳಿಗ್ಗೆೆ 11ಕ್ಕೆ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಯುವ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲೂ ದೂರು ನೀಡಬಹುದು’ ಎಂದರು.
ಜಿಲ್ಲೆೆಯಲ್ಲಿ ಕೋಮು ಆಧರಿತ ಕೊಲೆಗಳ ತಡೆಗೆ ಕೈಗೊಂಡ ಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ‘ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಂದರ್, ಉಳ್ಳಾಲ ಠಾಣೆಗಳ ವ್ಯಾಪ್ತಿಯಲ್ಲಿ ಕೋಮು ಸೂಕ್ಷ್ಮ ವಾತಾವರಣ ಇದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ನ ಬಂಟ್ವಾಳ, ಪುಂಜಾಲಕಟ್ಟೆೆ, ಪುತ್ತೂರು, ಬೆಳ್ತಂಗಡಿ ಠಾಣೆಗಳ ವ್ಯಾಪ್ತಿಯಲ್ಲೂ ಕೋಮು ಸೂಕ್ಷ್ಮ ಪ್ರದೇಶಗಳ ಸಂಖ್ಯೆ ಹೆಚ್ಚು ಇದೆ. ಇಂತಹ ಕಡೆ ಮೊಹಲ್ಲ ಸಮಿತಿ ಮತ್ತು ಯುವ ಸಮಿತಿಗಳನ್ನು ರಚಿಸಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸುವಂತೆ ಸೂಚಿಸಿದ್ದೇನೆ. ಸಮುದಾಯದ ಜೊತೆ ಪೊಲೀಸ್ ಇಲಾಖೆ ನಿಕಟ ಸಂಪರ್ಕ ಹೊಂದಿರಬೇಕು ಎಂಬುದು ಇದರ ಉದ್ದೇಶ’ ಎಂದರು.
‘ಠಾಣೆಯ ವ್ಯಾಪ್ತಿಯಲ್ಲಿ ಕನಿಷ್ಠ 10 ಮೊಹಲ್ಲಾ ಸಮಿತಿಗಳು ಇರಬೇಕು. ಅವುಗಳು ಕಾಟಾಚಾರಕ್ಕೆ ಸಭೆ ನಡೆಸಿದರೆ ಸಾಲದು. ಇಂತಿಷ್ಟು ಸಭೆ ನಡೆಸಿದ್ದೇವೆ ಎಂದು ಅಂಕಿ ಅಂಶ ನೀಡುವುದರಲ್ಲಿ ಅರ್ಥವಿಲ್ಲ. ಯಾವುದೇ ಅಹಿತಕರ ಘಟನೆಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕು’ ಎಂದರು.
‘ಇಂದು 10ಕ್ಕೂ ಹೆಚ್ಚು ಮಂದಿ ಅಹವಾಲು ಹೇಳಿಕೊಂಡಿದ್ದಾರೆ. ಈ ಬಗ್ಗೆೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದೇ ಮಾದರಿಯಲ್ಲಿ ಇತರ ಜಿಲ್ಲೆಗಳಲ್ಲೂ ಕುಂದು ಕೊರತೆ ಸಭೆಗಳನ್ನು ಹಮ್ಮಿಕೊಳ್ಳುತ್ತೇನೆ’ ಎಂದರು.
ಪಶ್ಚಿಮ ವಲಯದ ಐಜಿಪಿ ಡಾ.ಚಂದ್ರಗುಪ್ತ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಇದ್ದರು.