ಹೃದಯಾಘಾತದಿಂದ ನಿಧನರಾದ ಉಡುಪಿಯ ಮಲ್ಪೆ ಠಾಣಾ ಎಎಸ್ಐ ವಿಶ್ವನಾಥ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಉಡುಪಿಯ ಆದರ್ಶ ಆಸ್ಪತ್ರೆಯಿಂದ ವಿಶ್ವನಾಥ್ ಅವರ ಪಾರ್ಥಿವ ಶರೀರವನ್ನು ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಕೊಂಡೋಯ್ದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಸಂತೆಕಟ್ಟೆ ಕಲ್ಯಾಣಪುರ ಸಮೀಪದ ನಿಡಂಬಳ್ಳಿಯ ಅವರ ನಿವಾಸಕ್ಕೇ ಕೊಂಡೋಯ್ದು ಸಕಲ ವಿಧಿ ವಿಧಾನ ನೆರವೇರಿಸಲಾಯಿತು.
ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಅವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು. ಬಳಿಕ ಮಲ್ಪೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಎಸ್ಐ ವಿಶ್ವನಾಥ್ ಅವರು ಎದೆನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.
ಪೊಲೀಸ್ ಇಲಾಖೆಗೆ ಸೇರುವ ಮೊದಲು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಅನೇಕ ಕ್ರಿಡಾಪಟುಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದರು. 1993ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ವಿಶ್ವನಾಥ್ ಅವರು ತನ್ನ ಸರಳ ನಡೆ ನುಡಿಯಿಂದ ಜನರಿಗೆ ಹತ್ತಿರವಾಗಿದ್ದರು.
ಕ್ರೀಡಾಪಟುವಾಗಿದ್ದ ವಿಶ್ವನಾಥ್ ಅವರು ಮಲೇಷಿಯದಲ್ಲಿ ನಡೆದ ಮಾಸ್ಟರ್ ಅತ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದರು. ಉಡುಪಿ ಸಂಚಾರಿ ಠಾಣೆಯಲ್ಲೂ ಕರ್ತವ್ಯ ನಿರ್ವಹಿಸಿದ್ದ ವಿಶ್ವನಾಥ್ ತನ್ನ ಕಾರ್ಯದಕ್ಷತೆಗೆ ಹೆಸರಾಗಿದ್ದರು. ಕುಂದಾಪುರ ಠಾಣೆಗೆ ವರ್ಗಾವಣೆಯಾಗಿದ್ದ ವಿಶ್ವನಾಥ್ ಅವರು ಇತ್ತೀಚಿಗಷ್ಟೇ ಮಲ್ಪೆ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು. ಅವರ ನಿಧನಕ್ಕೆ ಉಡುಪಿಯ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




