ಮಂಗಳೂರು: ಭದ್ರತೆ ಬಗ್ಗೆ ಸಂದೇಹ ಮತ್ತು ಆತಂಕ ಮೂಡಿಸುವಂತಹ ವಾಟ್ಸ್ ಆಯಪ್ ಚಾಟಿಂಗ್ ನಡೆಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲ ಸೃಷ್ಟಿಸಿದ್ದ ಯುವಕ ಮತ್ತು ಯುವತಿಯ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರಿಬ್ಬರಿಗೆ ವಿಮಾನಯಾನಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯ ಮ್ಯಾನೇಜರ್ ನೀಡಿರುವ ದೂರಿನಂತೆ ದಿಪಯಾನ್ ಮಾಜಿ (23) ಮತ್ತು ಸಿಮ್ರಾನ್ ಟಾಮ್ (23) ವಿರುದ್ಧ ಭಾರತೀಯ ದಂಡ ಸಂಹಿತೆ 505 (1)(ಬಿ) ಮತ್ತು (ಸಿ)ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯುವತಿವಿಮಾನದೊಳಗಿದ್ದ ತನ್ನ ಗೆಳೆಯ ದಿಪಯಾನ್ ಮಾಜಿ ಎನ್ನುವಾತನಿಗೆ ಕಳುಹಿಸಿದ್ದ ವಾಟ್ಸ್ ಆಯಪ್ ಸಂದೇಶದಲ್ಲಿ ‘ಬಾಂಬರ್’ ಎನ್ನುವ ಶಬ್ದವನ್ನು ಉಲ್ಲೇಖೀಸಿದ್ದು, ನಿರ್ದಿಷ್ಟ ಸಮುದಾಯದ ಬಗ್ಗೆಯೂ ಚಾಟ್ ಮಾಡಿದ್ದರು ಎಂದು ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಆತಂಕ ಮತ್ತು ಗೊಂದಲ ಸೃಷ್ಟಿಸಿ ವಿಮಾನ ಪ್ರಯಾಣ ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಯುವತಿ ಮತ್ತು ಯುವಕನಿಗೆ ವಿಮಾನಯಾನಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ನಿಷೇಧ ಹೇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.