ಬೆಂಗಳೂರು: ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯನ್ನು ಒಂದು ರೂಪಾಯಿ ಲಂಚವಿಲ್ಲದೇ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕಂದಾಯ ಇಲಾಖೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಣೆ, ಅಭಿಶಿಕ್ಷಣ ತರಬೇತಿ ಮತ್ತು 4000 ಕ್ರೋಮ್ ಬುಕ್ ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಹಿಂದೆ 94-95 ರಲ್ಲಿ ಗೋವಿಂದೇಗೌಡರು ಇದ್ದ ಸಂದರ್ಭದಲ್ಲಿ ಒಂದು ಲಕ್ಷ ಉಪಾಧ್ಯಾಯರನ್ನು ಲಂಚವಿಲ್ಲದೇ, ಮಧ್ಯವರ್ತಿಗಳಿಲ್ಲದೇ ನೇಮಕಾತಿ ಮಾಡಲಾಗಿತ್ತು. ಪ್ರಸ್ತುತ ಆರು ಲಕ್ಷ ಅರ್ಜಿಗಳಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಆಯ್ಕೆಯಾಗಿದ್ದು, ಆಯ್ಕೆಯಾಗಿರುವವರು ಪುಣ್ಯವಂತರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದೀರಿ. 9834 ಒಟ್ಟು ಗ್ರಾಮ ಆಡಳಿತಾಧಿಕಾಗಳಿದ್ದು, ಅದರಲ್ಲಿ 8003 ಜನ ಕಾರ್ಯನಿರ್ವಹಿಸುತ್ತಿದ್ದಾರೆ.ಈಗ 1000 ಜನ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಗ್ರಾಮ ಆಡಳಿತಾಧಿಕಾರಿಯ ಹುದ್ದೆ ಖಾಲಿ ಇಲ್ಲದಂತೆ ಭರ್ತಿ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಅಲ್ಲೇ ಇದ್ದು ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮಗಳಲ್ಲಿಯೇ ವಾಸ ಮಾಡುವುದು ಉತ್ತಮ ಎಂದರು.
ಗ್ರಾಮ ಆಡಳಿತಾಧಿಕಾರಿಗಳು ಉತ್ತಮ ನಡತೆ, ಸಂಪರ್ಕವನ್ನು ಹೊಂದಿದ್ದರೆ ರೈತರು ನಿಮ್ಮ ಮಾತನ್ನು ಕೇಳುತ್ತಾರೆ. ಗ್ರಾಮ ಆಡಳಿತಾಧಿಕಾರಿಗಳು ಒಳ್ಳೆ ರೀತಿಯ ಕೆಲಸ ಮಾಡಿಕೊಟ್ಟರೆ ಅವರ ಮೇಲೂ ಗೌರವ ವಿರುತ್ತದೆ. ಜನರ ಕೆಲಸ ದೇವರ ಕೆಲಸ ಎಂದು ನೆನೆಪಿಟ್ಟುಕೊಳ್ಳಬೇಕು. ನಾವಿರುವುದೇ ಜನರ ಸೇವೆಗಾಗಿ ಎನ್ನುವುದನ್ನು ಮರೆಯಬಾರದು. ಆರು ಲಕ್ಷ ಜನ ಸರ್ಕಾರಿ ನೌಕರರು ಅವರಿಗಾಗಿಯೇ ಇರುವುದು. ರಾಜಕಾರಣಿಗಳು, ಜನರಿಂದ ಆಯ್ಕೆಯಾದರೆ, ಸರ್ಕಾರದಿಂದ ಆಯ್ಕೆಯಾದ ಸರ್ಕಾರಿ ನೌಕರರು ಜನಸೇವೆಯನ್ನು ಅವರ ಧ್ಯೇಯವಾಗಿಸಬೇಕು.
ಕಂದಾಯ ಇಲಾಖೆಯದ್ದು ಅತ್ಯಂತ ಜವಾಬ್ದಾರಿಯುತ ಕೆಲಸ. ಇಲ್ಲಿ ಸುಧಾರಣೆಗಳನ್ನು ತರಬೇಕೆಂದು ಕೃಷ್ಣಬೈರೇಗೌಡರಿಗೆ ಸೂಚಿಸಲಾಗಿತ್ತು,ಅವರು ಈಗಾಗಲೇ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಅವರಿಗೆ ಇನ್ನಷ್ಟ ಸುಧಾರಣೆಗಳನ್ನು ತರುವ ಶಕ್ತಿ ಇದೆ ಎಂದು ನಂಬಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಅಧಿಕಾರಿಗಳು ರೈತರಿಗೆ ಎಲ್ಲ ಸಮಯದಲ್ಲಿಯೂ ಲಭ್ಯವಿರಬೇಕು
ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಪಂಚಾಯಿತಿಯ ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯವಿರುವುದರಿಂದ ರೈತರಿಗೆ ಎಲ್ಲ ಸಮಯದಲ್ಲಿಯೂ ಲಭ್ಯವಿರಲು ಸಾಧ್ಯವಾಗುತ್ತದೆ. ರೈತರ ಮನೆಮನೆಗೆ ಭೇಟಿ ನೀಡಿ ಅವರ ಕುಂದುಕೊರತೆಗಳನ್ನು ಆಲಿಸಬೇಕು. ಗ್ರಾಮ ಆಡಳಿತಾಧಿಕಾರಿಗಳ ಮಂಜೂ 9834 ಮಂಜೂರಾದ ಹುದ್ದೆಗಳಿಗೆ ಲ್ಯಾಪಟಾಪ್ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲನೇ ಹಂತದಲ್ಲಿ 4000 ಲ್ಯಾಪ್ ಟಾಪ್ ಗಳನ್ನು ಇಂದು ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೆ ರೈತರಿಗೆ ತೊಂದರೆ ಕೊಡುವುದಾಗಲಿ, ಭ್ರಷ್ಟಾಚಾರಕ್ಕಾಗಲಿ ಅವಕಾಶ ಕೊಡಬಾರದು. ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರಿಗೆ ಅನುಕೂಲ ಕಲ್ಪಿಸುವುದು ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದರು.
ಗ್ರಾಮ ಆಡಳಿತಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ರೈತರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಜಮೀನಿನ ದಾಖಲಾತಿಗಳ ಹಾಗೂ ಸರ್ವೇಗಳು ಸಮರ್ಪಕವಾಗಿ ನಡೆದರೆ ಗ್ರಾಮಗಳಲ್ಲಿ ಭೂಮಿ ಕಲಹವಿಲ್ಲದೇ ಬಹುಮಟ್ಟಿಗೆ ನೆಮ್ಮದಿ ನೆಲಸಲು ಸಾಧ್ಯವಿದೆ. ಇಂದು ನೇಮಕಗೊಂಡಿರುವ ಗ್ರಾಮ ಆಡಳಿತಾಧಿಕಾರಿಗಳು ಉದಾಸೀನತೆಯ ಭಾವನೆಯನ್ನು ತಳೆಯದೇ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ತಿಳಿಸಿ ಶುಭಹಾರೈಸಿದರು.