ಮಂಗಳೂರು: ಕಬ್ಬಿಣದ ಸೆಂಟ್ರಿಂಗ್ ಶೀಟ್ ಮತ್ತು ಕಬ್ಬಿಣದ ಕಾಲಂ ಬಾಕ್ಸ್ ಗಳನ್ನು ಕದ್ದು ಸಾಗಿಸುತ್ತಿದ್ದ ಪ್ರಕರಣವನ್ನು ಉಳ್ಳಾಲ ಪೊಲೀಸರು ಭೇದಿಸಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿ ಒಟ್ಟು 9,75,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಮೂಡುಬಿದಿರೆಯ ತೋಡಾರ್ ನಿವಾಸಿ ಇಲಿಯಾಸ್ ಯಾನೆ ಮೊಹಮ್ಮದ್ ಇಲಿಯಾಸ್ (23) ಬಂಧಿತ ಆರೋಪಿ.
ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಡಿ. ಅವರು ಇಂದು ಬೆಳಗ್ಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪಿಲಿಕೂರು ಭಾಗದಿಂದ ಕೆ.ಸಿ. ರೋಡ್ ಕಡೆಗೆ ಹೋಗುತ್ತಿದ್ದ ರಿಟ್ಸ್ ಕಾರು ಮತ್ತು ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಾರಿನಲ್ಲಿದ್ದ ಹಂಝ ಮತ್ತು ಮೊಹಮ್ಮದ್ ಶಾಹಿಲ್ ಓಡಿ ತಪ್ಪಿಸಿಕೊಂಡಿದ್ದಾರೆ.
ಪಿಕಪ್ ವಾಹನದಲ್ಲಿ ಕಬ್ಬಿಣದ 120 ಸೆಂಟ್ರಿಂಗ್ ಶೀಟ್ ಮತ್ತು 3 ಸೆಟ್ ಕಬ್ಬಿಣದ ಕಾಲಂ ಬಾಕ್ಸ್ ಪತ್ತೆಯಾಗಿವೆ.
ಸೆಂಟ್ರಿಂಗ್ ಶೀಟ್ ಗಳನ್ನು ಅಗಸ್ಟ್ 7 ರಂದು ರಾತ್ರಿ ಕೊಲ್ಯದ ನಿರ್ಮಾಣ ಹಂತದ ಕಟ್ಟಡದ ಎದುರಿನಿಂದ ಹಾಗೂ ಕಬ್ಬಿಣದ ಕಾಲಂ ಬಾಕ್ಸ್ ಗಳನ್ನು ಒಂದುವರೆ ತಿಂಗಳ ಹಿಂದೆ ಪಾನೀರು ಎಂಬಲ್ಲಿಂದ ಕಳವು ಮಾಡಲಾಗಿತ್ತು ಎಂದು ಪಿಕಪ್ ಚಾಲಕ ಇಲಿಯಾಸ್ ಯಾನೆ ಮೊಹಮ್ಮದ್ ಇಲಿಯಾಸ್ ಮಾಹಿತಿ ನೀಡಿದ್ದಾನೆ.
ಕದ್ದ ಮಾಲುಗಳನ್ನು ತತ್‌ಕ್ಷಣ ಮಾರಾಟ ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳ ಬಹುದೆಂಬ ಭಯದಿಂದ ಅವುಗಳನ್ನು ಪಿಲಿಕೂರಿನ ನಿರ್ಜನ ಪ್ರದೇಶದಲ್ಲಿ ಬಚ್ಚಿಡಲಾಗಿತ್ತು.
ಈಗ ಅದನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಆತ ತಿಳಿಸಿದ್ದಾನೆ.ಒಟ್ಟು 2,50,000 ರೂಪಾಯಿ ಮೌಲ್ಯದ ಸೆಂಟ್ರಂಗ್ ಶೀಟ್, 1,25,000 ರೂ. ಮೌಲ್ಯದ ಕಬ್ಬಿಣದ ಕಾಲಂ ಬಾಕ್ಸ್, ತಲಾ 3 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ ಮತ್ತು ರಿಟ್ಸ್ ಕಾರನ್ನು ಪೊಲೀಸರು ವಶ ಪಡಿಸಿದ್ದಾರೆ.