ಮಂಗಳೂರು : ಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ದಂಧೆ ಪ್ರಕರಣ ಸಂಬಂಧ ವೈದ್ಯರು, ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ಮತ್ತೋರ್ವ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 11 ಕ್ಕೇರಿದೆ.
ಕೆಎಂಸಿ ಅಂತಿಮ ವರ್ಷದ ವಿದ್ಯಾರ್ಥಿ ತುಮಕೂರಿನ ಡಾ.ವಿ.ಎಸ್. ಹರ್ಷಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದೇರಳಕಟ್ಟೆಯ ಯೆನೇಪೋಯಾ ಮೆಡಿಕಲ್ ಕಾಲೇಜು, ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ. ಅತ್ತಾವರ, ಕೆ.ಎಂ.ಸಿ ಮಣಿಪಾಲ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ವೈದ್ಯರಾದ ಡಾ. ಸಮೀರ್(32), ಮಣಿಮಾರನ್ ಮುತ್ತು(28)ರನ್ನು ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್ (24), ಡಾ.ವರ್ಷಿಣಿ ಪ್ರತಿ (26), ಡಾ.ರಿಯಾ ಚಡ್ಡ (22), ಡಾ.ಹೀರಾ ಬಸಿನ್ (23) ಹಾಗೂ ವೈದ್ಯ ಡಾ.ಸಮೀರ್ (32), ಮಣಿಮಾರನ್ ಮುತ್ತು (28), ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್ (34) ಬಂಧಿಸಲಾಗಿದೆ. ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ (27), ಡಾ.ಕ್ಷಿತಿಜ್ ಗುಪ್ತ (23) ಇವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲು
ಬಂಧಿತರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು, ವಿದ್ಯಾರ್ಥಿನಿಯರು ಮಾದಕ ನಶೆಯ ಚಟಕ್ಕೆ ಬೀಳಲು ಮುಖ್ಯ ಕಾರಣ ಅವರು ಲಿವಿಂಗ್ ಟುಗೆದರ್ ಸಂಬಂಧವನ್ನು ಹೊಂದಿದ್ದರು ಎಂಬುದು ತಿಳಿದು ಬಂದಿದೆ.
ಇವರಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿದ್ದು, ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ಯುವಕ-ಯುವತಿಯರು ಲಿವಿಂಗ್ ಟುಗೆದರ್ ಎಂದು ಒಟ್ಟಿಗೆ ಇರುತ್ತಾರೆ. ಸೆಕ್ಸ್, ಮಾದಕ ನಶೆಯಲ್ಲಿ ತೇಲಾಡುತ್ತಾರೆ ಎಂಬ ಅಚ್ಚರಿ ಮಾಹಿತಿ ಬಯಲಾಗಿದೆ.
ಮಂಗಳೂರಿನ ಹಲವು ಅಪಾರ್ಟ್ ಮೆಂಟ್ ಗಳಲ್ಲಿ ಲಿವಿಂಗ್ ಟುಗೆದರ್ ಎಂಬ ಹೆಸರಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಟ್ಟಾಗಿ ವಾಸ ಮಾಡುತ್ತಿದ್ದು, ಗಾಂಜಾ ನಶೆಯಲ್ಲಿ ತೇಲಾಡಿ..ತಮ್ಮ ಸ್ನೇಹಿತರನ್ನು ಕೂಡ ಇದಕ್ಕೆ ಸೆಳೆಯುತ್ತಿದ್ರು ಎಂಬ ವಿಚಾರ ತನಿಖೆ ವೇಳೆ ಹೊರಬಿದ್ದಿದೆ.
ಇತ್ತೀಚೆಗೆ ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ ಎಂಬಾತನನ್ನುಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈ ಸ್ಪೋಟಕ ಸತ್ಯ ಬಯಲಾಗಿದೆ. ಬಂಧಿತರಿಂದ 2 ಕೆ.ಜಿ ಗಾಂಜಾ, ಒಂದು ನಕಲಿ ಪಿಸ್ತೂಲ್, ಡ್ರಾಗರ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳನ್ನೇ ಟಾರ್ಗೆಟ್ ಮಾಡಿಕೊಂಡು ವಿದ್ಯಾರ್ಥಿಗಳು ಮತ್ತು ವೈದ್ಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು.