ಮಂಗಳೂರು: ನಗರದ ಕೆಂಜಾರಿನಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ವಾನ ತಂಡದದಲ್ಲಿದ್ದ ಜೂಲಿ ನಿವೃತ್ತಿ ಹೊಂದಿದೆ. ಸಿಐಎಸ್ಎಫ್‌ನ ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್‌ನ ಕೆ9 ಸ್ಕ್ವಾಡ್‌ನ ಸದಸ್ಯೆ ಲ್ಯಾಬ್ರಡಾರ್ ಶ್ವಾನ ಜೂಲಿಗೆ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಜೂಲಿ ಬದಲಿಗೆ 11ತಿಂಗಳ ಲ್ಯಾಬ್ರಡಾರ್ ತಳಿಯ ಶ್ವಾನ ರಿಯೊವನ್ನು ಕೆ9ತಂಡಕ್ಕೆ ಸ್ವಾಗತಿಸಲಾಯಿತು. ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ ಮತ್ತು ಸಿಐಎಸ್ಎಫ್‌ನ ಅಧಿಕಾರಿಗಳು ಜೂಲಿಯ ಅಚಲ ಸಮರ್ಪಣೆ ಮತ್ತು ನಿಷ್ಠೆಯನ್ನು ಕೊಂಡಾಡಿದರು. 8 ವರ್ಷಗಳ ಹಿಂದೆ ಕೆ9 ಸ್ಕ್ವಾಡ್‌ಗೆ ಸೇರ್ಪಡೆಗೊಂಡ ದಿನದಿಂದ, ಜೂಲಿ ವಿಮಾನ ನಿಲ್ದಾಣದಲ್ಲಿ ಹಲವಾರು ಭದ್ರತಾ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ತೆ ಮತ್ತು ಗಸ್ತು ಕರ್ತವ್ಯಗಳಲ್ಲಿ ಅಸಾಧಾರಣ ಕೌಶಲ್ಯ ಪ್ರದರ್ಶಿಸಿದೆ. ಬೀಳ್ಕೊಡುಗೆ ಸಂದರ್ಭ ವಿಶೇಷ ಹೂವಿನಿಂದ ಅಲಂಕೃತಗೊಂಡ ಟ್ರಾಲಿಯಲ್ಲಿ ಜೂಲಿಯನ್ನು ಕರೆದೊಯ್ಯಲಾಯಿತು. ಈ ಶ್ವಾನವನ್ನು ದತ್ತು ಪಡೆದ ಹ್ಯಾಂಡ್ಲರ್ ಕುಮಾರ ಅವರ ಆರೈಕೆಯಲ್ಲಿ ಜೂಲಿ ನಿವೃತ್ತ ಜೀವನವನ್ನು ಕಳೆಯಲಿದೆ. ರಿಯೋ ನಾಯಿಮರಿಯನ್ನು ಔಪಚಾರಿಕವಾಗಿ ತಂಡಕ್ಕೆ ಸ್ವಾಗತಿಸಲು ಜೋಶಿ ಅವರು ತಮ್ಮ ಹ್ಯಾಂಡ್ಲರ್ ದಲ್ಬೀರ್ ಸಿಂಗ್ ಅವರ ಸಮ್ಮುಖದಲ್ಲಿ ರಿಯೊ ಅವರ ಕಾಲರ್‌ಗೆ ಹೊಸ ಹಗ್ಗವನ್ನು ಕಟ್ಟಲಾಯಿತು. ರಿಯೊ ಈಗ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸುವ 4ಸದಸ್ಯರಿರುವ ಕೆ9 ಸ್ಕ್ವಾಡ್‌ನ ಭಾಗವಾಗಿದೆ. ರಿಯೊ ರಾಂಚಿಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಶ್ವಾನ ತರಬೇತಿ ಸೌಲಭ್ಯದಲ್ಲಿ ಕಠಿಣ ತರಬೇತಿ ಪಡೆದಿದೆ.