ಪುತ್ತೂರು: ಸಿ ಮತ್ತು ಡಿ ದರ್ಜೆ ಸ್ಥಾನಮಾನಕ್ಕೆ ಒತ್ತಾಯಿಸಿ ಫೆ.6ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಗ್ರಾ.ಪಂ.ನೌಕರರ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಸರಕಾರ ಸ್ಪಂದಿಸದೇ ಇದ್ದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಎಚ್ಚರಿಸಿದ್ದಾರೆ.
ಗ್ರಾಮ ಪಂಚಾಯಿತಿ ನೌಕರರಿಂದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ನನ್ನ ಬೆಂಬಲ ಇದೆ, ಗ್ರಾಮೀಣ ಮಟ್ಟದಲ್ಲಿ ಸರಕಾರದ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸುವುದೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯತ್ ಕೆಲಸಗಾರರು. ಹಳ್ಳಿಗಳಲ್ಲಿ ಇವರನ್ನೆಲ್ಲಾ ಸರಕಾರಿ ನೌಕರರೆಂದೇ ಜನ ಪರಿಗಣಿಸುತ್ತಾರೆ. ಆದರೆ ಕಳೆದ ಮೂವತ್ತು ಮೂವತ್ತೈದು ವರ್ಷಗಳಿಂದಲೂ ಈ ನೌಕರರ ಪಾಡು ಕೇಳುವವರಿಲ್ಲ. ಗ್ರಾಮ ಪಂಚಾಯತ್ ಗಳಲ್ಲಿ ಕೆಲಸ ನಿರ್ವಹಿಸಿ ಪಂಚಾಯತ್ ಸುಸೂತ್ರವಾಗಿ ಕೆಲಸ ನಿರ್ವಹಿಸಲು ನೆರವಾಗುತ್ತಿರುವ ಕ್ಲರ್ಕ್ ಗಳು, ಡಾಟಾ ಎಂಟ್ರಿ ಆಪರೇಟರ್ ಗಳು, ನೀರು ಬಿಡುವವರು, ಬಿಲ್ ಕಲೆಕ್ಟರ್ ಗಳು, ವಾಹನ ಚಾಲಕರು, ಶುಚಿತ್ವ ನೌಕರರು, ಅಟೆಂಡರುಗಳು ಮುಂತಾದವರಿಗೆ ಯಾವುದೇ ರೀತಿಯ ಉದ್ಯೋಗ ಭದ್ರತೆ ಇಲ್ಲ. ಅವರಿಗೆ ಸರಿಯಾದ ಸಂಬಳ ಇಲ್ಲ. ಅವರನ್ನೆಲ್ಲಾ ಸರಕಾರಗಳು ಜೀತದಾಳುಗಳಂತೆ ದುಡಿಸುತ್ತಿದೆ. ಇವರಿಗೆಲ್ಲ ಕನಿಷ್ಠ ವೇತನವನ್ನಷ್ಟೇ ನೀಡಲಾಗುತ್ತಿದೆ. ಸ್ಥಳೀಯವಾಗಿ ನಮಗೆ ಇರುವಂಥ ಒಂದು ಆಡಳಿತದ ವ್ಯವಸ್ಥೆ ಎಂದರೆ ಗ್ರಾಮ ಪಂಚಾಯತ್. ಇವತ್ತು ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿಗೆ ಈ ನೌಕರರು ನೀಡುವ ಸೇವೆ ಅನನ್ಯವಾಗಿದೆ. ಆದರೆ ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಸಿಬ್ಬಂದಿಗಳನ್ನು ಸರಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ.
ನಮಗೆಲ್ಲರಿಗೂ ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಪಂಚಾಯತ್ ನೌಕರರು ಮಾಡುವಂತಹ ಸೇವೆ ಅನನ್ಯವಾದದ್ದು. ಆದರೆ ಇಂದು ಅವರ ಬದುಕಿನ ಭದ್ರತೆಗೆ ಬೇಕಾಗಿ ಹೋರಾಟದ ದಾರಿ ಹಿಡಿದಿದ್ದಾರೆ. ಈ ಬಾರಿ ಮತ್ತೆ ಗ್ರಾಮ ಪಂಚಾಯತ್ ನೌಕರರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಈ ಮುಷ್ಕರಕ್ಕೆ ತಾತ್ವಿಕ ನೆಲೆಯಲ್ಲಿ ನನ್ನ ಸಂಪೂರ್ಣ ಬೆಂಬಲವಿದೆ. ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳಿಗೆ ಸರಕಾರ ತಕ್ಷಣವೇ ಸ್ಪಂದಿಸಿ, ಗ್ರಾಮ ಪಂಚಾಯತ್ ನೌಕರರ ಬದುಕಿಗೆ ಭದ್ರತೆ ನೀಡಬೇಕು. ಸರಕಾರ ಸೂಕ್ತವಾಗಿ ಸ್ಪಂದಿಸದೇ ಇದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.