ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಜೆಸಿಬಿ ಯಂತ್ರ ಬಳಸಿ ನಡೆಸಲು ಯತ್ನಿಸಿದ್ದ ಎಟಿಎಂ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ಜೆಸಿಬಿ ಸಹಿತ 15.50 ಲಕ್ಷದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ದೇವರಾಜ್ @ದೇವ್ (24), ಭರತ್ ಹೆಚ್(20), ನಾಗರಾಜ ನಾಯ್ಕ @ನಾಗು (21), ಮ,ತ್ತು ಧನ ಸಹಾಯ ಮಾಡಿದ ಧನರಾಜ್ ನಾಯ್ಕ್@ಧನು(22) ಬಂಧಿತ ಆರೋಪಿಗಳಾಗಿದ್ದಾರೆ, ಆರೋಪಿಗಳಿಂದ 50 ,000 ಮೌಲ್ಯದ ಸ್ಪ್ಲೆಂಡರ್ ಬೈಕ್, 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕ್ರಮಿನಲ್ ಹಿನ್ನೆಲೆ ಉಳ್ಳವರಾಗಿದ್ದು ಈ ಹಿಂದೆ ಕೂಡ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 4 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾದಾಯಿನಿ ಸ್ಕೂಲ್ ಶಾಲೆ ಪಕ್ಕದ ರಾಜಶ್ರೀ ಕಟ್ಟಡದಲ್ಲಿನ ದಿ ಸೌತ್ ಇಂಡಿಯನ್ ಬ್ಯಾಂಕಿನ ಎಟಿಎಂ ಗಾಜನ್ನು ಒಡೆದು ಹಾಕಿ ಎಟಿಎಂ ಮಶೀನನ್ನು ಜೆಸಿಬಿ ಯಂತ್ರ ಬಳಸಿ ಕದ್ದು ಕೊಂಡು ಹೋಗಲು ಯತ್ನಿಸಿದ್ದರು. ಆರೋಪಿಗಳು ಕೃತ್ಯಕ್ಕರೆ ಬಳಸಿದ್ದ ಜೆಸಿಬಿ ಯಂತ್ರವು ಉಡುಪಿ ಜಿಲ್ಲೆ ಪಡುಬಿದ್ರಿಯಲ್ಲಿ ಕಳವು ಮಾಡಿದಾಗಿದ್ದು ಈ ಸಂಬಂಧ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಿ ಮಂಗಳೂರು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ.