ತೊಕ್ಕೊಟ್ಟು: ತೆಂಗಿನ ಕಾಯಿ ಕೀಳಲು ಮರವೇರಿದ್ದ ವೇಳೆ ಕಣಜದ ಹುಳುಗಳು ದಾಳಿ ನಡೆಸಿದ ಪರಿಣಾಮ ಕಾಯಿ ಕೀಳುವವ ಗಂಭೀರ ಗಾಯಗೊಂಡದ್ದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ತಂದೆ, ಮಗಳಿಗೂ ಹುಳುಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತೊಕ್ಕೊಟ್ಟು ಸಮೀಪದ ಉಳ್ಳಾಲ ಬೈಲು ಎಂಬಲ್ಲಿ ನಡೆದಿದೆ.
ಉಳ್ಳಾಲ ಬೈಲು ನಿವಾಸಿ ಜಿತನ್ ರೆಸ್ಕಿನ ಅವರು ಕಣಜದ ಹುಳುವಿನ ದಾಳಿಯಿಂದ ಗಂಭೀರ ಗಾಯಗೊಂಡು ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿತನ್ ಅವರು ವೃತ್ತಿ ಪರ ತೆಂಗಿನ ಕಾಯಿ ಕೀಳುವವರಾಗಿದ್ದು ಇಂದು ಬೆಳಿಗ್ಗೆ ಉಳ್ಳಾಲ ಬೈಲಿನ ಭವಾನಿ ಎಂಬವರ ಮನೆಯಲ್ಲಿ ಮರವೇರುವ ಯಂತ್ರದ ಮೂಲಕ ಕಾಯಿ ಕೀಳುತ್ತಿದ್ದ ವೇಳೆ ಮರದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಏಕಾ ಏಕಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ನೊಣಗಳ ದಾಳಿಯ ರಭಸಕ್ಕೆ ಜಿತನ್ ಅವರು ಮರದಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಪಕ್ಕದ ರಸ್ತೆಯಲ್ಲಿ ಮಗಳನ್ನ ಶಾಲಾ ವಾಹನಕ್ಕೆ ಬಿಡಲು ತೆರಳುತ್ತಿದ್ದ ಸ್ಥಳೀಯ ಬಾಡಿಗೆ ಮನೆ ನಿವಾಸಿ ಪ್ರವೀಣ್ ಪೂಜಾರಿ ಮತ್ತು ಅವರ ಮಗಳು ಧೃತಿಗೂ ಹುಳಗಳು ದಾಳಿ ನಡೆಸಿ ಗಾಯಗೊಳಿಸಿವೆ.
ಪ್ರವೀಣ್ ಮತ್ತು ಅವರ ಎರಡನೇ ತರಗತಿಯ ಮಗಳು ಧೃತಿ ಗಾಯಗೊಂಡಿದ್ದು ಇಬ್ಬರಿಗೂ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಕೌನ್ಸಿಲರ್ ನಮಿತಾ ಗಟ್ಟಿ ಅವರು ಅಪಾಯಕಾರಿ ಕಣಜದ ಗೂಡನ್ನ ತೆರವುಗೊಳಿಸುವುದಾಗಿ ಹೇಳಿದ್ದಾರೆ.