ಮೂಡಬಿದ್ರೆ: ಅಕ್ರಮ ದನ ಸಾಗಾಟದ ಆರೋಪದಲ್ಲಿ ವ್ಯಕ್ತಿಗಳಿಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿ ವಾಹನವನ್ನು ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಕಾರ್ಯಕರ್ತರೆನ್ನಲಾದ ಇಬ್ಬರನ್ನು ಮೂಡುಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಬಂಧಿಸಿ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.

ಕಡಂದಲೆಯ ಸುಧೀರ್ ಶೆಟ್ಟಿ ಹಾಗೂ ಸುರತ್ಕಲ್‌ನ ಧನರಾಜ್ ಬಂಧಿತ ಆರೋಪಿಗಳಾಗಿದ್ದು, ಇತರ ಐದು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮೂಡುಬಿದಿರೆ ಬಿರಾವಿನ ಕೂಸಪ್ಪ ಪೂಜಾರಿ ಅವರು ತನ್ನ ಪರಿಚಯದ ಕಾರ್ಕಳದ ಬಜಗೋಳಿಯ ಮನೆಯಿಂದ ಗೀರ್ ತಳಿಯ ಹೋರಿಯೊಂದನ್ನು ಸಂಗಬೆಟ್ಟುವಿನ ಅಬ್ದುಲ್ ರಹ್ಮಾನ್ ಅವರ ವಾಹನದಲ್ಲಿ ಶುಕ್ರವಾರ ಸಂಜೆ ಮೂಡುಬಿದಿರೆಯತ್ತ ತರುತ್ತಿದ್ದರು.ಗೀರ್ ತಳಿಯ ಹೋರಿಯನ್ನು ಗರ್ಭದಾರಣೆಯ ವಿಷಯದಲ್ಲಿ ತರುತ್ತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಬೆಳುವಾಯಿ ಬಳಿ ವಾಹನವನ್ನು ತಡೆದು ನಿಲ್ಲಿಸಿದ ಬಜರಂಗದಳದ ಕಾರ್ಯಕರ್ತರೆನ್ನಲಾದ ಆರೋಪಿಗಳು ವಾಹನದಲ್ಲಿದ್ದ ಕೂಸಪ್ಪ ಪೂಜಾರಿ ಹಾಗೂ ಅಬ್ದುಲ್ ರಹ್ಮಾನ್ ಅವರಿಬ್ಬರ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಸಾಗಾಟಕ್ಕೆ ಸಂಬಂಧಿಸಿ ದಾಖಲೆಪತ್ರಗಳನ್ನು ತೋರಿಸಿದರೂ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮೂಡುಬಿದಿರೆ ಆಳ್ವಾಸ್ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮೂಡುಬಿದಿರೆ ಇನ್ಸ್ಪೆಕ್ಟರ್ ಅವರು, ಸುಧೀರ್ ಶೆಟ್ಟಿ ಮತ್ತು ಧನರಾಜ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಕೂಸಪ್ಪ ಅವರು ನೀಡಿರುವ ದೂರಿನಂತೆ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದ್ದು, ಉಳಿದ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.