ಮಂಗಳೂರು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಇದಾಗಿದ್ದು, ಡಿ. 26 ರಿಂದ 28 ರವರೆಗೆ ಸರ್ಕಾರಿ ಬಸ್ಸುಗಳ ಸಂಚಾರ ವ್ಯತ್ಯಯವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ
ಮೂಡಬಿದರೆಯಲ್ಲಿ ಇದೇ ಡಿ.21 ರಿಂದ 27ರ ವರೆಗೆ ನಡೆಯುತ್ತಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಸುಮಾರು 50,000 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು/ಪೋಷಕರು/ಶಿಕ್ಷಕರು ಆಗಮಿಸಿದ್ದಾರೆ.
ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಇತರೆ ವಿಭಾಗಗಳಿಂದ ಹಾಗೂ ವಾ.ಕರಸಾ.ನಿಗಮ, ಕ.ಕ.ರ.ಸಾ.ನಿಗಮಗಳಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದು, ಆ ವಿದ್ಯಾರ್ಥಿಗಳು/ಪೋಷಕರು/ಶಿಕ್ಷಕರು ಡಿ. 27 ರಂದು ಕಾರ್ಯಕ್ರಮ ಮುಕ್ತಾಯಗೊಂಡು ಹಿಂತಿರುಗುವ ವೇಳೆಗೆ ಮೂಡಬಿದಿರೆಯಿಂದ ರಾಜ್ಯದ ವಿವಿಧ ಸ್ಥಳಗಳಿಗೆ/ರೈಲ್ವೇ ನಿಲ್ದಾಣಗಳಿಗೆ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಿ ವಾಹನಗಳನ್ನು ನಿಯೋಜಿಸಬೇಕಾಗಿರುತ್ತದೆ.
ಆದ್ದರಿಂದ ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು ವಲಯಗಳಲ್ಲಿ ಕಾರ್ಯಾಚರಣೆಯಲ್ಲಿರುವ ಸಾರಿಗೆಗಳಲ್ಲಿ ಡಿ. 26 ರಿಂದ 28 ರವರೆಗೆ ದೈನಂದಿನ ಮಾರ್ಗ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಗಳು ಸಹಕರಿಸುವಂತೆ ಕರಾರಸಾನಿಗಮ ಮಂಗಳೂರಿನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.