ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕಟ್ಟು ನಿಟ್ಟಿನ ವಾಹನ ತಪಾಸಣೆ ನಡೆಸುತ್ತಿದ್ದು, ಗುರುವಾರ ಅಧಿಕಾರಿಗಳು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಜಿಲ್ಲಾಧ್ಯಕ್ಷ ಸುದರ್ಶನ ಅವರ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಅಧಿಕಾರಿ ಜಯಕೀರ್ತಿ ಹೆಚ್.ಬಿ. ಅವರಿದ್ದ ತಂಡವು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಿರುವ ಇನೋವಾ ಕಾರು ಹಾಗೂ ಐದು ಪೊಲೀಸ್ ಭದ್ರತಾ ವಾಹನದೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ಚಾರ್ಮಾಡಿ ಘಾಟ್ ರಸ್ತೆ ಮೂಲಕ ಬರುತ್ತಿದ್ದಾಗ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ಕಾರು ಪರಿಶೀಲನೆ ನಡೆಸಿ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚಾರ್ಮಾಡಿ ಚೆಕ್ ಪೋಸ್ಟ್ ಮೂಲಕ ಚಿಕ್ಕಮಗಳೂರು ಜಿಲ್ಲೆಯ ವಾಹನಗಳು ದ.ಕ ಜಿಲ್ಲೆಗೆ ಪ್ರವೇಶಿಸುತ್ತಿದ್ದು, ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಆಗಿರುವ ಇಲ್ಲಿ ಕಟ್ಟು ನಿಟ್ಟಿನ ವಾಹನ ತಪಾಸಣೆ ನಡೆಸಲಾಗುತ್ತಿದೆ.
Author: main-admin
ವೇಣೂರು: ವೇಣೂರು ಜುಗುಲ್ ಬಾರ್ ಎದುರು ಹಲ್ಲೆ ನಡೆಸಿದ ಪ್ರಕರಣದಡಿ ಗೋಳಿಯಂಗಡಿ ಪ್ರಸಾದ್ ಅಲಿಯಾಸ್ ಬಾಡು ಹಾಗೂ ಗರ್ಡಾಡಿಯ ಕರುಣಾಕರ ಶೆಟ್ಟಿ ಎಂಬವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಬ್ಬರು ಆರೋಪಿಗಳು ಕುಡಿದ ಮತ್ತಿನಲ್ಲಿ ಮೂಡುಕೋಡಿ ನಿವಾಸಿ ನಾರ್ಣಪ್ಪ ಪೂಜಾರಿ (70) ಎಂಬವರಿಗೆ ಹಲ್ಲೆ ನಡೆಸಿದ್ದು, ತಲೆಯ ಬಾಗಕ್ಕೆ ಗಾಯಗೊಂಡಿದ್ದ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಿಎಸ್‌ಪಿ ನಾಯಕ ರಾಜ್‌ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅತೀಕ್ ಅಹ್ಮದ್‌ನ ಮಗ ಸೇರಿದಂತೆ ಇಬ್ಬರು ಆರೋಪಿಗಳನ್ನ ಯುಪಿ ಪೊಲೀಸರು ಅಲ್ಲಿನ ಝಾನ್ಸಿಯಲ್ಲಿ ಎನ್‌ಕೌಂಟರ್ ಮಾಡಿದ್ದಾರೆ. ಅಸಾದ್ ಅಹ್ಮದ್ ಹಾಗೂ ಗುಲಾಮ್ ಅನ್ನೊ ಆರೋಪಿಗಳು ಮೃತಪಟ್ಟಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಈವರೆಗೆ ಒಟ್ಟು 4 ಆರೋಪಿಗಳನ್ನ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದಂತಾಗಿದೆ. ಇತ್ತ ಇದೇ ಪ್ರಕರಣದಲ್ಲಿ ಅತೀಕ್ ಅಹ್ಮದ್‌ನನ್ನ ಪ್ರಯಾಗ್‌ರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅತೀಕ್ ಅಹ್ಮದ್‌ಗೆ 14 ದಿನಗಳ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಇನ್ನು ಅತೀಕ್ ಕೋರ್ಟ್‌ನಲ್ಲಿದ್ದಾಗಲೇ ಮಗನ ಎನ್‌ಕೌಂಟರ್ ಸುದ್ದಿ ತಿಳಿದುಬಂದಿದೆ ಎನ್ನಲಾಗಿದೆ.
ಉಳ್ಳಾಲ:ಸಿಎಂ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗೆ ಟೆಂಪೋ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ಆಡಂಕುದ್ರು ಬಳಿ ಸಂಭವಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಳ್ಳಾಲದ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆ ರಾ.ಹೆ.66 ರಲ್ಲಿ ಬಂದೋಬಸ್ತ್ ನಲ್ಲಿದ್ದ ಕಂಕನಾಡಿ ಸಂಚಾರಿ ಠಾಣೆ ಪೊಲೀಸ್ ಪೇದೆ ಮಂಜುನಾಥ ಹೆಗಡೆ ಟೆಂಪೂ ಢಿಕ್ಕಿಯಾಗಿ ಗಾಯಗೊಂಡಿದ್ದಾರೆ. ಮಂಜುನಾಥ್ ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ತಲಪಾಡಿ ಕಡೆಗೆ ತೆರಳುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ಕಳೆದು ಪೊಲೀಸ್ ಪೇದೆಗೆ ಢಿಕ್ಕಿ ಹೊಡೆದಿದೆ. ಪೇದೆಗೆ ತಲೆ ಹಾಗು ಕೈಗಳಿಗೆ ಗಾಯಗೊಂಡಿದ್ದು ಪೇದೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಉಳ್ಳಾಲ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರು 12 ಮಂದಿಯಿಂದ ಲಕ್ಷಾಂತರ ಹಣ ಪಡೆದು ವಂಚಿಸಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆ ನಡೆಸಿದ ಲೀನಾ ಲೋಬೋ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿತೇಶ ಕ್ಲಿಶನ್ ಡಿ ಸೋಜಾ, ರಿಕ್ಸನ್ ಸಂತಾನಿಸ್, ಎಡ್ಲಿನ್ ಕ್ಲಿಂಟನ್ ಡಿ ಸೋಜಾ, ಗ್ಲಾನ್ಸಿಲ ಫೆರ್ನಾಂಡೀಸ್, ಜೋಸೆಫ್ ಡಿ ಸೋಜಾ, ಗ್ಲಾನೆಟ್ ಫೆರ್ನಾಂಡೀಸ್, ಸಚಿನ್ ಪಸನ್ನ, ವಿನಯ್ ಜೋಯ್ ಅಲ್ವಾರಿಸ್, ಜೀವನ್ ಕ್ಲಿಫರ್ಡ್ ಡಿ ಸೋಜಾ, ನಾಗೇಂದ್ರ ಗಣಪತಿ, ಅವಿಶ್ ಡಿ ಸೋಜ, ಜೋಯ್ ಸನ್ ಲೂವಿಸ್ ಎಂಬವರಿಂದ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ ಲೀನಾ ಅವರಿಂದ ಫೆ.2 ರಿಂದ ಮಾ.12 ರವರೆಗೆ ಹಂತಹಂತವಾಗಿ ಗೂಗಲ್ ಪೇ ಮೂಲಕ ಒಟ್ಟು ರೂ.2.82.000/- ಹಣವನ್ನು ಪಡೆದು, ನಂತರ ಉದ್ಯೋಗವನ್ನು ಕೊಡಿಸದೆ ವಂಚಿಸಿದ್ದಾರೆ. ದೂರುದಾರರು ಹಣವನ್ನು ವಾಪಸ್ಸು ಕೇಳಿದರೂ ಹಿಂತಿರುಗಿಸದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಡುಪಿ : ಸಿಎಂ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು,ಬೈಂದೂರಿನ ಅಗ್ನಿಶಾಮಕ ಸಿಬ್ಬಂದಿಗಳಿಂದ ಕೂಡಲೇ ಬೆಂಕಿ ನಂದಿಸಲಾಗಿದೆ.ಕ್ಷಣಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಬಳಿ ಬೆಂಕಿ ಸಿಎಂ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಬೆಂಕಿ ಕಾಣಿಸಿಕೊಂಡಿದ್ದು,ಭಯಭೀತರಾಗಿದ್ದಾರೆ. ಅರೆಶಿರೂರು ಹೆಲಿಪ್ಯಾಡ್‌ನಲ್ಲಿ ಸಿಎಂ ಇಳಿದು ಕೊಲ್ಲೂರು ಮೂಕಾಂಬಿಕಾ ದೇಗುಲದ ದರ್ಶನಕ್ಕೆ ಎಸ್ಕಾರ್ಟ್ ಮೂಲಕ ತೆರಳಿದ್ದಾರ ಎಂದು ತಿಳಿದು ಬಂದಿದೆ.
ಸುಳ್ಯ: ಆಹಾರ ಅರಸುತ್ತ ಬಂದ ಕಾಡಾನೆಗಳು ತೋಟಕ್ಕೆ ನುಗ್ಗಿ ಅಲ್ಲಿದ್ದ ಕೆರೆಗೆ ಬಿದ್ದ ಘಟನೆ ಸುಳ್ಯದ ಅಜ್ಜಾವರ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಸನತ್ ರೈ ಎಂಬವರ ತೋಟದಲ್ಲಿದ್ದ ಕೆರೆಗೆ ಎರಡು ಮರಿಯಾನೆ ಮತ್ತು ಎರಡು ದೊಡ್ಡ ಆನೆ ಬಿದ್ದಿವೆ. ಆಹಾರ ಅರಸುತ್ತಾ ಬಂದಿದ್ದ ಕಾಡಾನೆಗಳು ತೋಟದಲ್ಲಿ ಬಾಳೆಗಿಡ- ಅಡಿಕೆ ಮರ ಹುಡಿ ಮಾಡಿದ್ದು, ಬಳಿಕ ಕೆರೆಗೆ ಬಿದ್ದಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಆಗಮಿಸಿ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ. ಜೆಸಿಬಿ ಬಳಸಿ ಕೆರೆಯನ್ನು ಅಗಲ ಮಾಡಿ ಕಾಡಾನೆಗಳನ್ನು ಹೊರತೆಗೆಯಲು ಪ್ರಯತ್ನ ಮಾಡುತ್ತಿದ್ದಾರೆ. ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸುಳ್ಯ ಅಜ್ಜಾವರ, ಮಂಡೆಕೋಲು ಮುಂತಾದ ಭಾಗದಲ್ಲಿ ಕಾಡಾನೆ ಹಾವಳಿ ಇದೆ.
ಬಂಟ್ವಾಳ;ಕೆಎಸ್‌ಆರ್ ಟಿಸಿ ಬಸ್- ಬೈಕ್ ಗೆ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಸರಪಾಡಿ ನಿವಾಸಿ ಯುವಕ ಶ್ರೇಯಸ್ (30) ಮೃತ ದುರ್ದೈವಿ. ಖಾಸಗಿ ಕಂಪೆನಿಯೊಂದರಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಶ್ರೇಯಸ್, ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ವಾಪಾಸು ಬೈಕಿನಲ್ಲಿ ಹೋಗುವ ವೇಳೆ ಅಪಘಾತ ಸಂಭವಿಸಿದೆ. ಶ್ರೇಯಸ್ ಬಿಸಿರೋಡು ಕಡೆಯಿಂದ ಧರ್ಮಸ್ಥಳ ಹೆದ್ದಾರಿಯಲ್ಲಿ ಮನೆಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಧರ್ಮಸ್ಥಳ ಕಡೆಯಿಂದ ವೇಗವಾಗಿ ಬರುತ್ತಿದ್ದ ಸರಕಾರಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬೈಕಿಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿದ್ದ, ಅಪಘಾತಕ್ಕೆ ಸ್ಥಳದಲ್ಲಿ ರಕ್ತದೋಕುಳಿ ಹರಿದಿತ್ತು. ಕೂಡಲೇ ಈತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಿದ್ದರು ,ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ 108 ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬೆಂಗಳೂರು : ಐತಿಹಾಸಿಕ ಬೆಂಗಳೂರು ಕರಗ ಹೊತ್ತಿದ್ದ ಪೂಜಾರಿ ಮೇಲೆ ರಾಸಾಯನಿಕ ದಾಳಿ ಪ್ರಕರಣ ಸಂಬಂಧ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ನಿವಾಸಿ ಆದಿ ನಾರಾಯಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆದಿನಾರಾಯಣ ಕರಗ ಹೊತ್ತಿದ್ದ ಪೂಜಾರಿ ಜ್ಞಾನೇಂದ್ರ ಮೇಲೆ ರಾಸಾಯನಿಕ ದಾಳಿ ಮಾಡಿದ್ದರು. ಬೆಂಗಳೂರು ಕರಗೋತ್ಸವದ ವೇಳೆ ಕರ ಹೊತ್ತಿದ್ದ ಪೂಜಾರಿ ಮೇಲೆ ರಾಸಾಯನಿಕ ದಾಳಿ ನಡೆದಿತ್ತು. ಏಪ್ರಿಲ್ 6 ರಂದು ಬೆಂಗಳೂರು ರಕಗೋತ್ಸವ ಹಿನ್ನೆಲೆಯಲ್ಲಿ ಪೂಜಾರಿ ಜ್ಞಾನೇಂದ್ರ ಕರಗ ಹೊತ್ತಿದ್ದರು. ಅಂದು ಮಧ್ಯರಾತ್ರಿ ಭಕ್ತಾದಿಗಳ ಗುಂಪಿನಲ್ಲಿ ಆರೋಪಿ ಆದಿನಾರಾಯಣ ರಾಸಾಯನಿಕ ದ್ರಾವಣ ಸಿಂಪಡಿಸಿದ್ದ. ಇದರಿಂದ ಪೂಜಾರಿಯ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ.
ಪುತ್ತೂರು: ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಂಪಾಡಿ ಗುಮ್ಮಟಗದ್ದೆ ಎಂಬಲ್ಲಿ ವರದಿಯಾಗಿದೆ. ಗುಮ್ಮಟಗದ್ದೆಯ ನಿವಾಸಿ ಬಾಲಕೃಷ್ಣ ಎಂಬವರ ಪುತ್ರಿ ಪುಣ್ಯಶ್ರೀ(32)ಮೃತ ಯುವತಿ. ಪುಣ್ಯಶ್ರೀಯನ್ನು ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಉದ್ದದಪಳಿಕೆ ನಿವಾಸಿ ಪುರುಶೋತ್ತಮ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪುಣ್ಯಶ್ರೀ ಕಳೆದ ಕೆಲ ದಿನಗಳ ಹಿಂದೆ ಬೆಳ್ತಂಗಡಿಯ ಪತಿಯ ಮನೆಯಿಂದ ತನ್ನ ತವರು ಮನೆಯಾದ ಗುಮ್ಮಟಗದ್ದೆಗೆ ಆಗಮಿಸಿದ್ದರು ಎನ್ನಲಾಗಿದೆ.ಎ.10ರಂದು ತನ್ನ ಪತಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಅಲ್ಲದೆ ಅದೇ ದಿನ ತನ್ನ ಚಿಕ್ಕಮ್ಮನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಮೃತರು ಪತಿ,ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










