ಬೆಳ್ತಂಗಡಿ: ತಾಲೂಕಿನ ಪುಂಜಾಲಕಟ್ಟೆ ಸನಿಹದ ಕುಕ್ಕಳ ಗ್ರಾಮದ ಹೋಂಡಾ ಶೋರೂಂ ಬಳಿ ಆಟೋ ರಿಕ್ಷಾ ಪಲ್ಟಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 3 ವರ್ಷದ ಬಾಲಕಿ ಗಂಭೀರ ಗಾಯಗೊಂಡ ಘಟನೆ ಸೆ. 24ರಂದು ನಡೆದಿದೆ.
ಗಾಯಾಳು ಬಾಲಕಿಯನ್ನು ಮುಂಡಾಜೆ ಕಡಿರುದ್ಯಾವರ ನಿವಾಸಿ, ಪ್ರಸ್ತುತ ಉಜಿರೆಯಲ್ಲಿ ನೆಲೆಸಿರುವ ಅಶ್ರಫ್ ಇಸ್ಮಾಯಿಲ್ ಎಂಬವರ ಪುತ್ರಿ ಅಝ್ಮೀ ಎಂದು ಗುರುತಿಸಲಾಗಿದೆ.
ಅಶ್ರಫ್ ಅವರ ಸಹೋದರ ಮುಸ್ತಫಾ ಅವರು ದುಡುಕುತನದಿಂದ ಆಟೋರಿಕ್ಷಾ ಚಲಾಯಿಸಿದುದರ ಪರಿಣಾಮ ರಿಕ್ಷಾ ಪಲ್ಟಿ ಹೊಡೆದಿದೆ.
ಅಶ್ರಫ್ ಅವರು ತಮ್ಮಿಬ್ಬರು ಪುತ್ರಿಯರಾದ ಅಝ್ಮೀ ಮತ್ತು ಐಝಾ ಅವರ ಜತೆಗೂಡಿ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಿಂದ ರಸ್ತೆಗೆಸೆಯಲ್ಪಟ್ಟು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿ ಅಝ್ಮೀ ಅವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.