ಚೆನ್ನೈ: ಪ್ರತಿಭಾವಂತ ಫುಟ್ಬಾಲ್ ಆಟಗಾರ್ತಿಯೊಬ್ಬಳ ಕಾಲಿನಲ್ಲಿ ಆಗಿದ್ದ ಸಣ್ಣ ಗಾಯಕ್ಕೆ ವೈದ್ಯರು ನಡೆಸಿದ ಅರೆಬರೆ ಸರ್ಜರಿಗೆ ಆಕೆಯ ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಿ ಪ್ರಾಣವನ್ನೇ ಬಲಿಪಡೆದುಕೊಂಡ ಹೃದಯ ವಿದ್ರಾವಕ ಘಟನೆ ಚೆನ್ನೈಯಲ್ಲಿ ನಡೆದಿದೆ.
ಪ್ರಿಯಾ ಆರ್ (17) ಅವರಿಗೆ ಬಲಗಾಲಿನ ಅಸ್ಥಿರಜ್ಜು (ಲಿಗಮೆಂಟ್) ನೋವು ಪ್ರಾರಂಭವಾಗಿತ್ತು. ತಮಿಳುನಾಡಿನ ಪೆರಿಯಾರ್ ನಗರದಲ್ಲಿನ ಸರ್ಕಾರಿ ಪೆರಿಫೆರಲ್ ಆಸ್ಪತ್ರೆಯಲ್ಲಿ ನವೆಂಬರ್ 7ರಂದು ಪ್ರಿಯಾ, ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಅದು ಮೊಣಕಾಲಿನ ಕೆಳಗಿನ ಆಕೆಯ ಬಲಗಾಲನ್ನು ಕತ್ತರಿಸುವುದು ಸೇರಿದಂತೆ ಮತ್ತೆರಡು ಆಘಾತಕಾರಿ ಆಪರೇಷನ್‌ಗಳಿಗೆ ಎಡೆಮಾಡಿಕೊಟ್ಟಿತ್ತು. ವೈದ್ಯರು ಮಾಡಿದ್ದ ಎಡವಟ್ಟಿನಿಂದಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಪ್ರಿಯಾ ಸಾವನ್ನಪ್ಪಿದ್ದಾಳೆ. ಆರ್ಥ್ರೋಸ್ಕೋಪಿಕ್ ಲಿಗಮೆಂಟ್ ಸರಿಪಡಿಸುವ ಶಸ್ತ್ರಚಿಕಿತ್ಸೆ ನಡೆಸಿದ್ದ ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು, ವೈದ್ಯಕೀಯ ನಿರ್ಲಕ್ಷ್ಯದ ಆರೋಪದಡಿ ಅಮಾನತು ಮಾಡಲಾಗಿದೆ. ಇವಳ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿ ಮಾತನಾಡಿದ ಕ್ವೀನ್ ಮೇರಿಸ್ ಕಾಲೇಜಿನ ದೈಹಿಕ ತರಬೇತಿ ಶಿಕ್ಷಕಿ ವಸಂತ ಕುಮಾರಿ ‘ಕ್ರೀಡಾ ಕೋಟಾದಡಿ ಪ್ರಿಯಾ ಕಾಲೇಜು ಪ್ರವೇಶಾತಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ ಆಕೆಗೆ ಅದು ಸಾಧ್ಯವಾಗಿರಲಿಲ್ಲ. ಹಾಗಿದ್ದೂ, ಆಕೆಯಲ್ಲಿನ ಆಸಕ್ತಿ ಕಂಡ ಕಾಲೇಜು ಬಿಎಸ್ಸಿ ದೈಹಿಕ ಶಿಕ್ಷಣ ಕೋರ್ಸ್‌ಗೆ ಸೀಟು ನೀಡಿತ್ತು. “ಆಕೆ ಫಾರ್ವರ್ಡ್‌ನಲ್ಲಿ ಫುಟ್ಬಾಲ್ ಆಡುತ್ತಿದ್ದಳು. ನಮ್ಮ ಜತೆ ಒಂದು ತಿಂಗಳು ಅಭ್ಯಾಸ ನಡೆಸಿದ್ದಳು. ಆಗಸ್ಟ್‌ನಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದಿತ್ತು. ಸೆಪ್ಟೆಂಬರ್‌ನಲ್ಲಿ ಕೋಚ್ ಬಳಿ ಬಂದ ಆಕೆ, ಕಾಲಿನಲ್ಲಿ ನೋವು ಇರುವುದಾಗಿ ತಿಳಿಸಿದ್ದಳು. ಅದು ಆಕೆಯ ಶಾಲಾ ದಿನಗಳಿಂದಲೂ ಕಾಡುತ್ತಿತ್ತು. ಆಕೆಯ ಬಲಗಾಲನ್ನು ಕತ್ತರಿಸಬೇಕು ಎನ್ನುವ ಸುದ್ದಿ ಮಾಧ್ಯಮಗಳ ಮೂಲಕ ನಮಗೆ ಗೊತ್ತಾದಾಗ, ಆಕೆಗೆ ಗರಿಷ್ಠ ಪ್ರಮಾಣದ ಬೆಂಬಲ ನೀಡಬೇಕು ಎಂದು ನಿರ್ಧರಿಸಿದ್ದೆವು. ಆದರೆ ಆಕೆಯ ಸಾವಿನ ಸುದ್ದಿ ಬಂದಾಗ, ಆಘಾತ ಉಂಟಾಯಿತು” ಎಂದು ಹೇಳಿದ್ದಾರೆ.