ಮಂಗಳೂರು: 13 ಗಂಭೀರ ಪ್ರಕರಣಗಳ ಆರೋಪಿಯನ್ನು ಸುರತ್ಕಲ್ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಬಂಧಿತನನ್ನು ಸುರತ್ಕಲ್ ಇಡ್ಯಾ ಗ್ರಾಮದ ಕಾನ ಆಶ್ರಯ ಕಾಲನಿ ನಿವಾಸಿ ಭರತ್ ಶೆಟ್ಟಿ (27) ಬಂಧಿತ ಆರೋಪಿ. ಬಂಧಿತ ಭರತ್ ಶೆಟ್ಟಿ ವಿರುದ್ಧ ಕಳೆದ ವರ್ಷ ಮೀಲಾದುನ್ನಬಿ ಸಂದರ್ಭ ಕಾಟಿಪಳ್ಳ 3ನೇ ಬ್ಲಾಕ್‌ನ ಮಸೀದಿಗೆ ಕಲ್ಲೆಸೆದ ಪ್ರಕರಣ, ಎಮ್ಮೆಕೆರೆ ನಿವಾಸಿ ರಾಹುಲ್ ಕೊಲೆ ಪ್ರಕರಣ ಸೇರಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ನಾಲ್ಕು ಕೊಲೆ ಯತ್ನ, ಡಕಾಯಿತಿ, ಕಾನೂನುಬಾಹಿರ ಸಭೆ, ಹಲ್ಲೆ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಒಟ್ಟು 13 ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಭರತ್ ಶೆಟ್ಟಿ ವಿರುದ್ಧದ ಕಾನೂನು ಕ್ರಮ ಇದ್ದರೂ, ಅದರ ನಡುವೆಯೇ ಈತ ಕ್ರಿಮಿನಲ್ ಚಟುವಟಿಕೆಗಳನ್ನು ಮುಂದುವರೆಸಿದ್ದಾನೆ. ಈ ಮೂಲಕ ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತಿದ್ದ. ಆದ್ದರಿಂದ ಕಾಳಧನಿಕರು, ಮಾದಕ ವ್ಯಸನಿಗಳು, ಜೂಜುಕೋರರು, ಗೂಂಡಾಗಳು, ಅನೈತಿಕ ಸಂಚಾರ ಅಪರಾಧಿಗಳ ಅಪಾಯಕಾರಿ ಚಟುವಟಿಕೆಗಳನ್ನು ಕರ್ನಾಟಕ ತಡೆಗಟ್ಟುವಿಕೆ ಸೆಕ್ಷನ್ 3ರ ಅಡಿಯಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವ, ಸ್ಲಂ ಗ್ರಾಬರ್ಸ್ ಮತ್ತು ವಿಡಿಯೋ ಅಥವಾ ಆಡಿಯೊ ಪೈರೇಟ್ಸ್ ಆಕ್ಟ್, 1985 (ಗೂಂಡಾ ಕಾಯ್ದೆ)ಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಭರತ್ ಶೆಟ್ಟಿ ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟದ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ವಶಕ್ಕೆ ಪಡೆದ ಪೊಲೀಸರು ಗೂಂಡಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.