ಬೆಂಗಳೂರು : ಕಾಯಂ ನಿರೀಕ್ಷೆಯಲ್ಲಿದ್ದ 12,000 ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರ ಪರವಾಗಿ ನಾಲ್ಕು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದು, ಮುಷ್ಕರ ಕೈಬಿಟ್ಟು ತಕ್ಷಣ ಕರ್ತವ್ಯಕ್ಕೆ ಹಾಜರಾಗದಿದ್ದರೆ ತಮ್ಮ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಮುಷ್ಕರ ಕೈಗೊಂಡಿದೆ. ಆದರೆ ಸರ್ಕಾರವು ಅತಿಥಿ ಉಪನ್ಯಾಸಕರ ಸೇವೆ ಕಾಯಂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದರ ಬದಲಿಗೆ ಜನವರಿಯಿಂದ 5 ಸಾವಿರ ರೂ. ವೇತನ ಹೆಚ್ಚಳ, ವಾರ್ಷಿಕ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ, ಕನಿಷ್ಟ 10ವರ್ಷ ಸೇವೆ ಮಾಡಿರುವವರಿಗೆ 50 ಸಾವಿರ ರೂ.ನಂತೆ 5 ಲಕ್ಷ ರೂ. ನಿಧಿ, ನಿತ್ಯ 15 ಗಂಟೆ ಕಾರ್ಯಭಾರ ಇರುವವರಿಗೆ ಮಾಸಿಕ ಒಂದು ರಜೆ ನೀಡುವ ನಿರ್ಧಾರ ಕೈಗೊಂಡಿದೆ.