ಬಂಟ್ವಾಳ: ಲಾರಿಯಡಿಗೆ ಬಿದ್ದು ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಮಾರಿಪಳ್ಳದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಉತ್ತರ ಪ್ರದೇಶ ಮೂಲದ ಪ್ರಸ್ತುತ ಪ್ರಸ್ತುತ ಉಡುಪಿ ನಿವಾಸಿ ಸೋನು (19) ಮೃತ ಯುವಕ.ಘಟನೆಯಲ್ಲಿ ಸಹಸವಾರ ಪ್ರಸಾದ್ ಪೂಜಾರಿ ಕಾರ್ಕಳ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋನು ಹಾಗೂ ಪ್ರಸಾದ್ ಅವರು ನೆಲ್ಯಾಡಿಯಲ್ಲಿರುವ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಮಂಗಳೂರಿಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಮಧ್ಯೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಜಂಕ್ಷನ್ ನಲ್ಲಿ ಹೆದ್ದಾರಿಯಲ್ಲಿ ಅಡ್ಡಲಾಗಿ ಇರಿಸಲಾದ ಬ್ಯಾರಿಕೇಡ್ ನ್ನು ಗಮನಿಸದ ಬೈಕ್ ಸವಾರ ಕಂಟೇನರ್ ಲಾರಿಯೊಂದನ್ನು ಓವರ್ ಟೇಕ್ ಮಾಡುವ ರಭಸಕ್ಕೆ ಬ್ಯಾರಿಕೇಡ್ ಗೆ ಡಿಕ್ಕಿಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಹಾಗೂ ಸಹಸವಾರ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ಹಿಂಬದಿಯಲ್ಲಿ ಬರುತ್ತಿದ್ದ ಅದೇ ಕಂಟೇನರ್ ಲಾರಿಯ ಚಕ್ರದಡಿಗೆ ಸಿಲುಕಿಕೊಂಡಿದ್ದಾರೆ.ಇದರಲ್ಲಿ ಸೋನು ಸ್ಥಳದಲ್ಲಿಯೇ ಮೃತಪಟ್ಟರೆ, ಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.