ಜೈಲಿನಿಂದಲೇ ರೌಡಿಶೀಟರ್ ನಗ್ನ ವಿಡಿಯೋ ಕಳುಹಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಸೇರಿದಂತೆ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ, ಸುಭಾಷ್ ಹಾಗೂ ಯೋಗೇಶ್ ಬಂಧಿತ ಆರೋಪಿಗಳು.
ರೌಡಿಶೀಟರ್ ಮನೋಜ್ ಜೈಲಿನಲ್ಲಿ ಕುಳಿತು ಮಾರ್ಫ್ ಮಾಡಿದ ಮಹಿಳೆಯ ಬೆತ್ತಲೆ ಫೋಟೋ, ವಿಡಿಯೋಗಳನ್ನು ಕಳುಹಿಸಿ ಮಹಿಳೆಯ ತಾಯಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ.
ನಿನ್ನ ಅಳಿಯನಿಗೆ ಫೋಟೋ, ವಿಡಿಯೋ ಕಳುಹಿಸಿ ಸಂಸಾರ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇದರಿಂದ ಮಹಿಳೆ ತಾಯಿ ಆರಂಭದಲ್ಲಿ 40,000 ಹಣ ನೀಡಿದ್ದರು. ಬಳಿಕ ಫೆ.9ರಂದು ಮನೋಜ್ ಸಹಚರ ಕಾರ್ತಿಕ್ ಮಹಿಳೆಯ ತಾಯಿಗೆ ವಾಟ್ಸಪ್ ಮೂಲಕ ಫೊಟೋ ಕಳುಹಿಸಿ ಬೆದರಿಕೆ ಹಾಕಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಲ್ಲದೇ ಜೈಲಿನಲ್ಲಿದ್ದ ಮನೋಜ್ ಕೂಡ ಕರೆ ಮಾಡಿ ಹಣ ನೀಡದಿದ್ದರೆ ನಿನ್ನ ಮಗಳ ಫೋಟೋ, ವಿಡಿಯೋವನ್ನು ಅಳಿಯನಿಗೆ ಕಳುಹಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದ.
ಇದರಿಂದ ಬೇಸತ್ತ ಸಂತ್ರಸ್ತೆ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮನೋಜ್ ಅಲಿಯಾಸ್ ಕೆಂಚನನ್ನು ಬಾಡಿವಾರೆಂಟ್ ಮೇಲೆ ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಸಹಾಯ ಮಾಡಿದ್ದ ಯೋಗೇಶ್, ಸುಭಾಷ್ ನನ್ನು ವಶಕ್ಕೆ ಪಡೆದಿದ್ದಾರೆ.