ಮುಲ್ಕಿ : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕೊಪ್ಪಳ ರೈಲ್ವೇ ಸೇತುವೆಯ ಕೆಳಭಾಗದ ನಂದಿನಿ ನದಿಯಲ್ಲಿ ನಾಲ್ವರು ಮಕ್ಕಳ ಮೃತ ದೇಹ ಪತ್ತೆಯಾಗಿದೆ. ಮೃತರನ್ನು ಸುರತ್ಕಲ್ ವಿದ್ಯಾದಾಯಿನಿ ಪ್ರೌಢ ಶಾಲೆಯ ಮಕ್ಕಳು ಎಂದು ಗುರುತಿಸಲಾಗಿದೆ. ಸುರತ್ಕಲ್ ವಿದ್ಯಾದಾಯಿನಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಯಶ್ವಿತ್ ಚಂದ್ರಕಾಂತ್, ನಿರುಪ್, ಅನ್ವಿತ್, ರಾಘವೇಂದ್ರ ಮಂಗಳವಾರ ಮಧ್ಯಾಹ್ನ ಶಾಲೆಯಲ್ಲಿ ಪ್ರಿಪರೇಟರಿ ಪರೀಕ್ಷೆ ಬರೆದ ಬಳಿಕ ಏಕಾಏಕಿ ನಾಪತ್ತೆಯಾಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಮಕ್ಕಳ ಮೃತದೇಹ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಕೊಪ್ಪಳ ರೈಲ್ವೇ ಸೇತುವೆಯ ಕೆಳಭಾಗದಲ್ಲಿ ನಂದಿನಿ ನದಿಯಲ್ಲಿ ಪತ್ತೆಯಾಗಿದೆ. ಈ ನಡುವೆ ಸುರತ್ಕಲ್ ಪ್ರೌಢಶಾಲೆಯ ಒಟ್ಟು 7 ಮಕ್ಕಳು ಈಜಾಡಲು ತೆರಳಿದ್ದರು ಎನ್ನಲಾಗುತ್ತಿದ್ದು, ಮೂವರು ಸ್ಥಳದಿಂದ ಘಟನೆಯನ್ನು ಕಂಡು ಹೆದರಿ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಮಕ್ಕಳ ಶವವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.