ಮುರುಡೇಶ್ವರ ಕಡಲ ತೀರದಲ್ಲಿ ನಡೆದ ದುರ್ಘಟನೆಯಲ್ಲಿ, ನೀರು ಪಾಲಾದ ಮೂವರು ವಿದ್ಯಾರ್ಥಿನಿಯರು ಶವವಾಗಿ ಪತ್ತೆಯಾಗಿದ್ದಾರೆ.
ದೀಕ್ಷಾ, ಲಾವಣ್ಯ, ಲಿಪಕಾ ಮೃತ ದೇಹವು ಮುರುಡೇಶ್ವರದ ದೇವಾಲಯದ ಹಿಂಭಾಗದ ಗುಡ್ಡ ಪ್ರದೇಶದ ಸಮೀಪ ಪತ್ತೆಯಾಗಿದೆ. ಕರಾವಳಿ ಕಾವಲು ಪಡೆ, ಲೈಫ್ ಗಾರ್ಡ್ ಮತ್ತು ಸ್ಥಳೀಯ ಮೀನುಗಾರರು ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಕೊತ್ತುರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು 54 ವಿದ್ಯಾರ್ಥಿನಿಯರನ್ನು ಒಳಗೊಂಡು ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು. ಅಲೆಗಳ ಅಬ್ಬರವು ಹೆಚ್ಚಿದ್ದರೂ ಶಿಕ್ಷಕರು ಮುನ್ನೆಚ್ಚರಿಕೆಯನ್ನು ಕೈಗೊಳ್ಳದೆ ಮಕ್ಕಳನ್ನು ಸಮುದ್ರದಲ್ಲಿ ಆಡಲು ಬಿಟ್ಟಿದ್ದರಿಂದ ಅಲೆಗಳ ಹೊಡೆತಕ್ಕೆ 7 ವಿದ್ಯಾರ್ಥಿನಿಯರು ಮತ್ತು ಓರ್ವ ಶಿಕ್ಷಕ ನೀರುಪಾಲಾಗಿದ್ದರು. ಈ ಸಂದರ್ಭದ ಲೈಫ್ ಗಾರ್ಡಗಳು ಯಾವುದೇ ಪರಿಕರ ಇಲ್ಲದಿದ್ದರೂ 3 ಜನ ವಿದ್ಯಾರ್ಥಿನಿಯರನ್ನು ಮತ್ತು ಓರ್ವ ಶಿಕ್ಷಕನನ್ನು ರಕ್ಷಣೆ ಮಾಡಿದ್ದಾರೆ. ಆದರೂ ಈ ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮೂವರು ಸಮುದ್ರಪಾಲಾಗಿ ಕಣ್ಮರೆಯಾಗಿದ್ದರು. ಕಣ್ಮರೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಈಗ ಶವವಾಗಿ ಪತ್ತೆಯಾಗಿದ್ದಾರೆ.