ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ದಿನದಂದು ಬೋಳಿಯಾರ್‌ನಲ್ಲಿ ಮಸೀದಿ ಎದುರು ಬಿಜೆಪಿ ವಿಜಯೋತ್ಸವ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಬಂಧಿತ ಹಿಂದೂ ಸಂಘಟನೆಗೆ ಸೇರಿದ ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಹಾಗೂ ಒತ್ತಡದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಶುಕ್ರವಾರ ಹೈಕೋರ್ಟ್ ನಿರ್ದೇಶನ ನೀಡಿದೆ. ಕಳೆದ ಜೂ.9ರಂದು ಬೋಳಿಯಾರ್‌ನಲ್ಲಿ ವಿಜಯೋತ್ಸವದಲ್ಲಿ ಘೋಷಣೆ ಕೂಗಿದ ವೇಳೆ ಹಲ್ಲೆ ಘಟನೆ ನಡೆದಿದೆ. ಘಟನೆಯಲ್ಲಿ ಐದು ಮಂದಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದರು. ಘಟನೆ ಬಗ್ಗೆ ಗಾಯಾಳುಗಳು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಬೈಕ್‌ನಲ್ಲಿ ಬಂದವರು ಪಾಕಿಸ್ಥಾನ ಕುನ್ನಿಗಳೇ ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮಸೀದಿ ಅಧ್ಯಕ್ಷರು ಮಾರನೇ ದಿನ ಕೊಣಾಜೆ ಪೊಲೀಸರಿಗೆ ಪ್ರತಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುರೇಶ್,ವಿನಯ, ಸುಭಾಸ್, ರಂಜಿತ್, ಧನಂಜಯ್ ಮತ್ತಿತರರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಅಲ್ಲದೆ ಇವರನ್ನು ಬಂಧಿಸಿದ್ದರು.ಪೊಲೀಸರು ಈ ಕ್ರಮದ ವಿರುದ್ಧ ಈ ಐದು ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದು, ಶುಕ್ರವಾರ ವಿಚಾರಣೆ ವೇಳೆ ನ್ಯಾಯಾಲಯ,ಪೊಲೀಸರು ವಿಳಂಬವಾಗಿ ಕೇಸು ದಾಖಲಿಸಿರುವ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿ ಅರುಣ್‌ಶ್ಯಾಮ್ ವಾದಿಸಿದ್ದರು.