ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ. ಜೂ.18ರಂದು ಮಧ್ಯಾಹ್ನ 12:43ಕ್ಕೆ ವಿಮಾನ ನಿಲ್ದಾಣದ ಇ- ಮೇಲ್ಗೆ ಬೆದರಿಕೆ ಸಂದೇಶ ರವಾನೆಯಾಗಿದೆ. ಕೆಲವೇ ಕ್ಷಣಗಳಲ್ಲಿ ಬಾಂಬ್ ಸ್ಪೋಟಗೊಳ್ಳಲಿದೆ ಎಂದು ಸಂದೇಶ ರವಾನೆಯಾಗಿತ್ತು. ಆದ್ದರಿಂದ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಭದ್ರತಾ ಅಧಿಕಾರಿಗಳು ವಿಮಾನ ನಿಲ್ದಾಣದ ಆವರಣದಲ್ಲಿ ತಪಾಸಣೆ ನಡೆಸಿ, ಯಾವುದೇ ಆತಂಕವಿಲ್ಲ ಎಂದು ದೃಢಪಡಿಸಿದ್ದಾರೆ. ದೇಶದ ಇತರ 41 ವಿಮಾನ ನಿಲ್ದಾಣಗಳಿಗೂ ಇದೇ ರೀತಿಯ ಬೆದರಿಕೆ ಇ-ಮೇಲ್ ಮೂಲಕ ಬಂದಿವೆ ಎಂದು ತಿಳಿದು ಬಂದಿದೆ. ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣಕ್ಕೆ 2024ರ ಎ. 29 ರಂದು ಮತ್ತು 2023ರ ಡಿ.26 ರಂದು ಬಾಂಬ್ ಬೆದರಿಕೆಯ ಇಮೇಲ್ ಬಂದಿತ್ತು.