ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹನ್ನೆರಡರ ಹರೆಯದ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನಗರಿಯನ್ನು ಹೊರತೆಗೆದು ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಸ್ಸಾಂ ಮೂಲದ ಬಾಲಕ ಕಮಲ್ ಹಸನ್ (12 ವ) ಚಿಕಿತ್ಸೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಬಾಲಕ.
ಕೊಡಗು ಜಿಲ್ಲೆಯ ಮಡಿಕೇರಿಯ ಕಾಫಿ ಎಸ್ಟೇಟ್ ಒಂದರಲ್ಲಿ ಬಾಲಕ ಕಮಲ್ ಹಸನ್ ಹೆತ್ತವರುಕೂಲಿ ಕೆಲಸ ಮಾಡುತ್ತಿದ್ದರು.
ಬಾಲಕ ಮನೆ ಬಳಿ ಶನಿವಾರ ಸಂಜೆ ಆಟವಾಡುತ್ತಿದ್ದಾಗ ಘಟನೆ ನಡೆದಿದೆ. ಈತ ಕತ್ತರಿಸಲ್ಪಟ್ಟ ತೆಂಗಿನ ಗರಿಯ ಮೇಲೆ ಬಿದ್ದ ರಬಸಕ್ಕೆ ತೆಂಗಿನ ಗರಿಯು ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಪೀಲ್ ಚೈನ್‌ನೊಂದಿಗೆ ಎದೆಯ ಒಳಗಡೆಗೆ ಹೊಕ್ಕಿತ್ತು.
ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆ ತರಲಾಗಿತ್ತು ಎನ್ನಲಾಗಿದೆ.
ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಬಾಲಕ ಕಮಲ್ ಹಸನ್‌ನನ್ನು ಮಧ್ಯರಾತ್ರಿ ಹೊತ್ತಿಗೆ ದಾಖಲಿಸಲಾಗಿತ್ತು. ದೇಹಕ್ಕೆ ತೆಂಗಿನ ಗರಿ ಹೊಕ್ಕಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಸುರೇಶ್ ಪೈ ನೇತೃತ್ವದ ತಂಡವು ಇದನ್ನು ಸವಾಲಾಗಿ ಸ್ವೀಕರಿಸಿ ರಾತ್ರಿ 1:30 ರಿಂದ 3:30ರ ತನಕ ಶಸ್ತ್ರ ಚಿಕಿತ್ಸೆ ನಡೆಸಿ ಬಾಲಕನ ಕುತ್ತಿಗೆಯಿಂದ ಕೆಳ ಭಾಗಕ್ಕೆ ಸುಮಾರು 20 ಸೆ.ಮೀನಷ್ಟು ಕೆಳಕ್ಕೆ ಇಳಿದಿದ್ದ ತೆಂಗಿನ ಗರಿ ಮತ್ತು ಸ್ಟೀಲ್ ಚೈನ್‌ನ್ನು ಹೊರತೆಗೆದಿದ್ದಾರೆ.
ಸಕಾಲದಲ್ಲಿ ದೊರೆತ ಚಿಕಿತ್ಸೆಯಿಂದಾಗಿ ಬಾಲಕ ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.