ಬ್ರಹ್ಮಾವರ : ಕಾರ್ಮಿಕರಿಬ್ಬರ ನಡುವೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಕಾರ್ಮಿಕರಿಬ್ಬರೂ ಹೊಡೆದಾಡಿಕೊಂಡು ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿರುವ ಘಟನೆ ಬ್ರಹ್ಮಾವರದಲ್ಲಿ ಸಂಭವಿಸಿದೆ.
ನೆಲ್ಯಾಡಿ ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ಜಿ.ಎ.ಸಿದ್ದೀಕ್(40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಸಿದ್ದಿಕ್ ಅವರ ಪತ್ನಿ ಮೈಮುನ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿದ್ದೀಕ್ ಮೂಲತಃ ಸಕಲೇಶಪುರ ಆನೆಮಹಲ್ ನಿವಾಸಿ. ಹಲವು ವರ್ಷಗಳಿಂದ ನೆಲ್ಯಾಡಿಯಲ್ಲಿ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು ಪತ್ನಿ, ಮಕ್ಕಳೊಂದಿಗೆ ಆಲಂಪಾಡಿಯಲ್ಲಿ ವಾಸವಾಗಿದ್ದರು. ಇತ್ತೀಚಿನ ಕೆಲ ಸಮಯದಿಂದ ಮೆಕ್ಯಾನಿಕ್ ವೃತ್ತಿ ಬಿಟ್ಟು ಬೇರೆ ಕೆಲಸ ನಿರ್ವಹಿಸುತ್ತಿದ್ದರು. ಜಿ.ಎ.ಸಿದ್ದೀಕ್ ಹಾಗೂ ನೆಲ್ಯಾಡಿಯ ಪ್ರಶಾಂತ ಎಂಬವರನ್ನು ಬೋಪಣ್ಣ ಎಂಬವರು ಇಂಟರ್‌ಲಾಕ್ ಅಳವಡಿಕೆ ಕೆಲಸಕ್ಕೆಂದು ಬ್ರಹ್ಮಾವರಕ್ಕೆ ಕರೆದೊಯ್ದಿದ್ದರು. ಬ್ರಹ್ಮಾವರದ ಹಾರಾಡಿ ನಿವಾಸಿ ಅರುಣ್ ಆಲ್ಪ್ರೇಡ್ ಎಂಬವರ ಅಂಗಳದಲ್ಲಿ ಬೆಳಗ್ಗೆ ಕೆಲಸ ಮಾಡುತ್ತಿದ್ದಾಗ ಸಿದ್ದಿಕ್ ಸಹ ಕಾರ್ಮಿಕರೊಂದಿಗೆ ಜಗಳ ಮಾಡಿ, ಹೊಡೆದಾಡಿಕೊಂಡು ಸುಸ್ತಾಗಿದ್ದರು. ಬಳಿಕ ಸಹ ಕಾರ್ಮಿಕರು ಅವರನ್ನು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಮಧ್ಯಾಹ್ನ 12.55ಕ್ಕೆ ಕರೆದೊಯ್ದಿದ್ದರು. ಆದರೆ ಸಿದ್ದೀಕ್ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಹೊಡೆದಾಟಕ್ಕೂ ಮೊದಲು ಸಿದ್ದೀಕ್ ಅವರ ಮೊಬೈಲ್‌ಗೆ ಯಾರದ್ದೋ ಫೋನ್ ಕರೆ ಬಂದಿದ್ದು ಆ ಬಳಿಕ ಅವರು ಮಾನಸಿಕವಾಗಿ ಕುಗ್ಗಿದಂತೆ ಭಾಸವಾಗಿದ್ದರು ಎಂದು ಸಹ ಕಾರ್ಮಿಕರು ತಿಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.