ಮಂಗಳೂರು: ವಿವಿಧ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿದ್ದ ಕುಖ್ಯಾತ ಅಂತರ್ ಜಿಲ್ಲಾ ಮನೆ ಕಳ್ಳತನದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ನಗರದ ಮೇಟಗಳ್ಳಿ ಮೂಲದ ಸಿದ್ಧರಾಜು@ ಮೂರ್ತಿ (52) ಬಂಧಿತ ಆರೋಪಿ.
ಬಂಧಿತನಿಂದ ಕಳವು ಮಾಡಿದ ಸುಮಾರು ರೂ 15,00,000/- ಮೌಲ್ಯದ 20 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹೀರೋ ಹೋಂಡಾ ಸ್ನೇಂಡರ್ ಪ್ಲಸ್ ಮೋಟಾರ್ ಸೈಕಲ್ ಹಾಗೂ 2 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನದ ಮತ್ತು ಉಡುಪಿ ಜಿಲ್ಲೆಯ ಮಣಿಪಾಲ, ಕಾರ್ಕಳ, ಶಿವಮೊಗ್ಗ ಜಿಲ್ಲೆಯ ಆಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಿದ್ದಾನೆ.
ಆರೋಪಿತನು ಮಂಗಳೂರು ನಗರ, ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕಾರ್ಕಳ ಪೊಲೀಸ್ ಠಾಣೆಯ ಒಟ್ಟು 2 ಪ್ರಕರಣಗಳು, ಶಿವಮೊಗ್ಗ ಜಿಲ್ಲೆ ಅಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಟ್ಟು 8 ಪ್ರಕರಣಗಳು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಮನೆ ಕಳ್ಳತನ ಮಾಡಿದ್ದು ಮಂಗಳೂರಿನಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ 1 ಮನೆ ಕಳ್ಳತನ ಮಾಡಿದ್ದು, ಒಟ್ಟು 13 ಪ್ರಕರಣಗಳ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿ ಈ ಹಿಂದೆ 2005 ರಲ್ಲಿ ಗಂಗಮ್ಮ ಎಂಬ ಮಹಿಳೆಯ ಕೊಲೆ ಪ್ರಕರಣದ ಆರೋಪಿಯಾಗಿದ್ದು,ಈ ಪ್ರಕರಣದಲ್ಲಿ ಅರೆಸ್ಟ್ ಆಗಿ ನ್ಯಾಯಾಂಗ ಬಂಧನದಲ್ಲಿದ್ದ ಈತ, 2006ರಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಮಂಡ್ಯ ಜಿಲ್ಲೆಯ ಮದ್ದೂರು ಎಂಬಲ್ಲಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ಈವರೆಗೆ ತಲೆಮರೆಸಿಕೊಂಡಿದ್ದ.
ಮಂಗಳೂರಿನಲ್ಲಿ ಮನೆಯೊಂದನ್ನು ಕಳ್ಳತನ ಮಾಡಲು ಬಂದ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಈತ ಹಾಸನ ಜಿಲ್ಲೆಯ ಅರಕಲಗೂಡಿನ ಪುನೀತ್ ಎಂಬಾತನೊಂದಿಗೆ ಸೇರಿ ಮನೆ ಕಳ್ಳತನ ಮಾಡುತ್ತಿದ್ದ ಎನ್ನುವುದು ಗೊತ್ತಾಗಿದೆ.