ಪುತ್ತೂರು: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಹಾಕಲಾಗಿದ್ದ ಸೂಚನಾ ಫಲಕವೊಂದು ವಿವಾದಕ್ಕೀಡಾಗಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಾಕಲಾಗಿದ್ದ ಸೂಚನಾ ಫಲಕವೊಂದರಲ್ಲಿ ‘ಬುರ್ಖಾ ತೆಗೆದು ಒಳಗೆ ಬನ್ನಿʼ ಎಂದು ಬರೆಯಲಾಗಿದೆ. ಈ ಮೂಲಕ ಚಿಕಿತ್ಸೆಯಲ್ಲೂ ಧರ್ಮ ಎಳೆದು ತರಲಾಗಿದೆ ಎಂದು ಜಾಲಾತಾಣದಲ್ಲಿ ಚರ್ಚೆ ಶುರುವಾಗಿದೆ.
ಕಳೆದ ಒಂದು ವರ್ಷಗಳ ಹಿಂದೆಯೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳ ಇಸಿಜಿ ತೆಗೆಯುವ ರೂಮ್ ಬಾಗಿಲಿನಲ್ಲಿ ಹಾಕಲಾಗಿದೆ. ಈ ಸೂಚನಾ ಫಲಕ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳ ಹಿಂದು ಹರಿದುಬಿಡಲಾಗಿತ್ತು. ಪುತ್ತೂರು ಶಾಸಕರು ಇರುವ ವಾಟ್ಸ್ ಅಪ್ ಗ್ರೂಪ್ ನಲ್ಲೂ ಈ ಪೋಸ್ಟ್ ಕಾಣಿಸಿಕೊಂಡಿದೆ. ಇನ್ನು ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆಗೆಯುವಂತೆ ಆಸ್ಪತ್ರೆಗೆ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಿದೆ. ಒತ್ತಡ ಹಿನ್ನಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಸೂಚನಾ ಫಲಕ ತೆರವುಗೊಳಿಸಿದ್ದಾರೆ.
ಇತ್ತ ಬುರ್ಖಾ ತೆಗೆಯದೆ ಇಸಿಜಿ ಮಾಡೋದು ಹೇಗೆಂದು ಆಸ್ಪತ್ರೆ ವೈದ್ಯರು ಮತ್ತು ನರ್ಸ್ ಗಳು ಗೊಂದಲದಲ್ಲಿದ್ದಾರೆ. ಇನ್ನು ಈ ಕುರಿತಾಗಿ ಪುತ್ತೂರು ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಸ್ಪಷ್ಟೀಕರಣ ನೀಡಿದ್ದು, ‘ಇದು ECG ಮಾಡಲು ಹೋಗುವ ಬಳಿ ಇರೋ ರೂಂನಲ್ಲಿ ಹಾಕಿರೋ ಸೂಚನಾ ಫಲಕ. ನಮ್ಮ ಸಮುದಾಯದವರೇ ಆದ ಝೈನಬಾ ಡಾಕ್ಟರ್ ಬಳಿ ಇರೋ ಸೂಚನಾ ಫಲಕ. ಹೆಚ್ಚಾಗಿ ನಮ್ಮ ಮುಸ್ಲಿಂ ಸಮುದಾಯಕ್ಕೆ ಸೇರಿದ ಡಾಕ್ಟರ್ ಗಳೇ ಅಲ್ಲಿ ಹೆಚ್ಚಿದ್ದಾರೆ. ಅದಲ್ಲದೇ ಅವರೆಲ್ಲರೂ ಹಿಜಾಬ್ ಧರಿಸಿಯೇ ಡ್ಯೂಟಿ ಮಾಡ್ತಾ ಇರ್ತಾರೆ. ಹಾಗಿರುವಾಗ ECG ಗೆ ತೆರಳುವ ಸಂದರ್ಭ ಬುರ್ಖಾ ತೆಗೆದು ಹೋಗಬೇಕಾಗುತ್ತದೆ. ಯಾಕಂದ್ರೆ ದೊಡ್ಡ ದೊಡ್ಡ ಅಪಘಾದ ಅಥವಾ ECG ಸಂದರ್ಭದಲ್ಲಿ ಮಾತ್ರ ಬುರ್ಖಾ ತೆಗೆಯಬೇಕಾಗುತ್ತದೆ. ಬುರ್ಖಾ ತೆಗೆಯದೇ ಇದ್ದಲ್ಲಿ ಚಿಕಿತ್ಸೆ ನೀಡುವುದು ಹೇಗೆ…? ECG ಮಾಡುವುದು ಹೇಗೆ…?. ಅಂಥಹ ಸಂದರ್ಭದಲ್ಲಿ ಮಾತ್ರ ಬುರ್ಖಾ ತೆಗೆಯಬೇಕಾಗುತ್ತದೆ ಎಂದು ಸ್ಪಷ್ಟೀಕರಣ’ ನೀಡಿದ್ದಾರೆ. ಅಲ್ಲದೆ ಇದ್ಯಾವುದೋ ಕೋಮುಭಾವನೆಯಲ್ಲಿ ಹಾಕಿದಂತ ಸೂಚನಾ ಫಲಕವಲ್ಲ. ಕಾಮಲೆ ಕಣ್ಣಿಗೆ ಎಲ್ಲವೂ ಹಳದಿ ಎಂಬಂತೆ ಕೆಲವರು ಪೋಸ್ಟ್ ವೈರಲ್ ಮಾಡಿದ್ದಾರೆ’ ಆಸ್ಪತ್ರೆಯ ಒಳಗಡೆ ಬುರ್ಖಾ ಧರಿಸಿ ಹೋಗಬಹುದು, ಆದ್ರೆ ECG ಗೆ ಹೋಗುವ ಸಂದರ್ಭ ಬುರ್ಖಾ ತೆಗೆದುಹೋಗಬೇಕು’ ಎಂದು ಮೋನು ಬಪ್ಪಳಿಗೆ ಸ್ಪಷ್ಟಣೆ ನೀಡಿದ್ದಾರೆ.