ಮಂಗಳೂರು: ಮೀನು ಸಾಗಾಟದ ಟಾಟಾ 407 ಗೂಡ್ಸ್ ಟೆಂಪೋ ವಾಹನದಲ್ಲಿ ಹಾಗೂ ಮಾರುತಿ ಆಲ್ಟೋ ಕಾರಿನಲ್ಲಿ ಬರೋಬ್ಬರಿ 120 ಕೆಜಿ ನಿಷೇಧಿತ ಮಾದಕದ್ರವ್ಯ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ಮಂಗಳೂರು ಸಿಸಿಬಿ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ, ಉಪ್ಪಳ ನಿವಾಸಿ ಮೊಯ್ದಿನ್ ಶಬ್ಬಿರ್(38), ಮಹಾರಾಷ್ಟ್ರ, ಥಾಣೆ, ಕಲ್ಯಾಣ, ಡೊಂಬಿವಲಿ(ವೆಸ್ಟ್), ನಿವಾಸಿ ಮಹೇಶ್ ದ್ವಾರಿಕಾನಾಥ ಪಾಂಡೆ(30), ಕೇರಳ ರಾಜ್ಯದ ಅಲಪ್ಪುಯ ಜಿಲ್ಲೆಯ ಚೆರ್ತಲಾ ಚಾರುಮಂಗಳಂ ನಿವಾಸಿ ಅಜಯ್ ಕೃಷ್ಣ(33), ಹರಿಯಾಣ ರಾಜ್ಯದ ಜಿಂದ್ ಜಿಲ್ಲೆಯ ನರವಾನ ತಾಲೂಕು, ಅಮರಗಡ್ ನಿವಾಸಿ ಜೀವನ್ ಸಿಂಗ್(35) ಬಂಧಿತ ಆರೋಪಿ. ಫೆ.17ರಂದು ಆಂಧ್ರಪ್ರದೇಶದಿಂದ ಮಂಗಳೂರು ಹಾಗೂ ಕೇರಳ ರಾಜ್ಯಕ್ಕೆ ಟಾಟಾ 407 ಗೂಡ್ಸ್ ಟೆಂಪೋ ವಾಹನದಲ್ಲಿ ಹಾಗೂ ಮಾರುತಿ ಅಲ್ಟೋ ಕಾರಿನಲ್ಲಿ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ 2 ವಾಹನಗಳನ್ನು ಪತ್ತೆ ಹಚ್ಚಿದ್ದಾರೆ. ವಾಹನಗಳಲ್ಲಿದ್ದ 35 ಲಕ್ಷ ಮೌಲ್ಯದ 119 ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ ಎರಡು ವಾಹನಗಳು ಸೇರಿದಂತೆ 5 ಮೊಬೈಲ್ ಫೋನ್ ಗಳು, ಮೀನು ಸಾಗಾಟಕ್ಕೆ ಉಪಯೋಗಿಸುವ ಮೀನಿನ ಕ್ರೆಟ್ ಹಾಗೂ ಇತರ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಮೌಲ್ಯ 51,00,000/- ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
