ಉಡುಪಿ : ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸಿ ಸರಣಿ ಅಪಘಾತಗಳಿಗೆ ಕಾರಣವಾದ ಆರೋಪದ ಮೇಲೆ ಮಣಿಪಾಲದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ವಿದ್ಯಾರ್ಥಿಯನ್ನು ಅಭಿಮನ್ಯು ನೇಗಿ ಎಂದು ಗುರುತಿಸಲಾಗಿದೆ.ಫೆಬ್ರವರಿ 14ರ ತಡರಾತ್ರಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳಿಗೆ ಈತ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೂ ಕಾರು ಢಿಕ್ಕಿಯಾಗಿದ್ದು, ರಿಕ್ಷಾ ಚಾಲಕ ಬಡಗಬೆಟ್ಟು ನಿವಾಸಿ ಶಿವಪ್ರಸಾದ್ (76) ಅವರ ತಲೆಗೆ ಗಂಭೀರ ಒಳಪೆಟ್ಟು ಬಿದ್ದಿದೆ.ಆರೋಪಿಯು ಕಾಲೇಜು ರಸ್ತೆಯ ಬಳಿಯಿಂದ ಅತಿವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಬಂದಿದ್ದು, ಬಳಿಕ ವಾಹನದ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಎಡ ಮತ್ತು ಬಲಕ್ಕೆ ನುಗ್ಗಿದ್ದಾನೆ ಎನ್ನಲಾಗಿದೆ. ಒಂದು ವೇಳೆ ಇದೇ ವೇಗದಲ್ಲಿ ಕಾರು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದ್ದರೆ ಮತ್ತಷ್ಟು ಭೀಕರ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.ಅಪಘಾತಕ್ಕೆ ಕಾರಣವಾದ ಕಾರು ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿದೆ. ಘಟನೆಯಲ್ಲಿ ರಸ್ತೆ ಬದಿಯ ಮಳಿಗೆಗಳ ಸಿಬ್ಬಂದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಭಾಗದಲ್ಲಿ ಸಾರ್ವಜನಿಕರು ಮತ್ತು ಉದ್ಯೋಗಿಗಳು ಹಗಲು-ರಾತ್ರಿ ಸಂಚರಿಸುತ್ತಿರುತ್ತಾರೆ. ಇಲ್ಲಿ ಕೆಲವು ಭಾರಿ ವಾಹನಗಳ ಅತಿವೇಗದ ಚಾಲನೆಯಿಂದಾಗಿ ಆಗಾಗ್ಗೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.




