ಬೆಂಗಳೂರು : ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಅಂತ್ಯಗೊಂಡಿದ್ದರೂ ಕೂಡ ಅ.15 ರವರೆಗೂ ರಾಜ್ಯದಲ್ಲಿ ಅಬ್ಬರದ ಮಳೆ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅ.10 ರ ಬಳಿಕ ಮಳೆಯ ಪ್ರಮಾಣ ಕೊಂಚ ತಗ್ಗಲ್ಲಿದ್ದು, ಅಕ್ಟೋಬರ್ 15 ರವರೆಗೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇಂದು ಮತ್ತು ನಾಳೆ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಶಿವಮೊಗ್ಗ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ನಾಳೆ ಗುಡುಗು ಸಹಿತ ಭಾರೀಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಕ್ಟೋಬರ್ 2 ರಂದು ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ವಿಜಯಪುರ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯಾದ್ಯಂತ ಮಳೆಯ ಆರ್ಭಟ ಮತ್ತೆ ಶುರುವಾಗಿದ್ದು, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಹಲವಡೆ ಸೇತುವೆಗಳು ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಾಯಚೂರಿನಲ್ಲಿ ಮಳೆಗೆ ಹತ್ತಿ, ತೊಗರಿ ಸೇರಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಇನ್ನೊಂದೆಡೆ ಮಳೆಯಿಂದ ತತ್ತರಿಸಿರುವ ಚಿತ್ರದುರ್ಗದ ಹೆಬ್ಬಾಳ್ ಗ್ರಾಮದ ಹೆಬ್ಬಾಳ್ ಕೆರೆ ಕೋಡಿಯೊಡೆದು ನೀರೆಲ್ಲಾ ಜಮೀನುಗಳಿಗೆ ನುಗ್ಗಿದೆ. ಇದೇ ಸಮಯದಲ್ಲಿ ಮನೆ ಮೇಲ್ಚಾವಣಿ ಕುಸಿಯುವುದನ್ನು ನೋಡಿದ ವೃದ್ಧೆಯೊಬ್ಬರು ಮೊಮ್ಮಕ್ಕಳನ್ನು ಬಚಾವ್ ಮಾಡಿದ ಘಟನೆಯೂ ನಡೆದಿದೆ. ಮಾತ್ರವಲ್ಲದೆ ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಸಚಿವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ರಾಯಚೂರಿನ ಲಿಂಗಸುಗೂರು, ಸಿಂಧನೂರು, ಮಸ್ಕಿ, ಮಾನ್ವಿ, ದೇವದುರ್ಗ, ಸಿರವಾರ ತಾಲ್ಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬೆಳೆಗಳು ನಾಶವಾಗಿ ರೈತರು ಪರಿತಪಿಸುವಂತಾಗಿದೆ. ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಹತ್ತಿ, ತೊಗರಿ ಸೇರಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ
ದಾವಣಗೆರೆ ಜಿಲ್ಲೆಯಲ್ಲೂ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಮಳೆಗೆ ಶಾಗಲೆ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದದು, ಭದ್ರಾ ಮುಖ್ಯ ಕಾಲುವೆಯ ತೂಗು ಸೇತುವೆ ಕುಸಿತಗೊಂಡಿದೆ. ಇದರಿಂದಾಗಿ ನಲ್ಕುಂದ ಗ್ರಾಮದ ಸುತ್ತ ಮುತ್ತಲಿನ ಜಮೀನಿಗೂ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.