ಬೆಂಗಳೂರು : ಇಂದು ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಿಎಂ ಪದಕ ನೀಡಲಾಗುತ್ತದೆ. ಅದರಂತೆ ರಾಜ್ಯದ 126 ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದ್ದು, ಆದರೆ ಇದರಲ್ಲಿ ಅಮಾನತುಗೊಂಡ ಹೆಡ್ ಕಾನ್ಸ್ಟೆಬಲ್ಗೆ ಸಿಎಂ ಪದಕ ವಿತರಣೆ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು ಇದರಲ್ಲಿ ಅಮಾನತುಗೊಂಡಿರುವ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾಗೆ ಸಿಎಂ ಪದಕ ನೀಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಸಾಭೀತಾದ ಹಿನ್ನೆಲೆ ಕಳೆದ ತಿಂಗಳಷ್ಟೇ ಹೆಡ್ ಕಾನ್ಸ್ಟೇಬಲ್ ಸಲೀಂ ಪಾಷಾ ಎಂಬುವವರನ್ನು ಅಮಾನತುಗೊಳಿಸಲಾಗಿತ್ತು.
ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಕೇಳಿಬಂದಿತ್ತು. ಜೊತೆಗೆ ಮೊಬೈಲ್ ಕಾಲ್ ಡಿಟೈಲ್ಸ್ ಸಂಗ್ರಹ ವೇಳೆ ಮೇಲ್ನೋಟಕ್ಕೆ ಆರೋಪ ಸಾಬೀತು ಕೂಡ ಆಗಿತ್ತು. ಆರೋಪ ಸಾಭೀತಾದ ಹಿನ್ನೆಲೆ ಕಳೆದ ತಿಂಗಳಷ್ಟೇ ಅಮಾನತುಗೊಳಿಸಲಾಗಿತ್ತು. ಇದೀಗ 2024ರಲ್ಲಿ ಅಮಾನತುಗೊಳಿಸಿ, 2023ರ ಕರ್ತವ್ಯ ನಿರ್ವಹಣೆಗೆ ಪದಕ ನೀಡಲಾಗಿದೆ. ಈ ಮೂಲಕ ಸಿಎಂ ಪದಕ ಘೋಷಣೆ ಚರ್ಚೆಗೆ ಗ್ರಾಸವಾಗಿದೆ.